ಕಲಬುರಗಿ
ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ಗೆ ನಿರ್ಬಂಧ ವಿಚಾರ ಜೋರು ಮಾಡುತ್ತಿರುವ ಬೆನ್ನಲ್ಲೇ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಬ್ಯಾನರ್ ತೆರವು ಮಾಡಲಾಗಿದೆ. ಭಗವಾ ದ್ವಜ ತೆರವು ಮಾಡಿದ್ದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರವಾಗಿ ಕಿಡಿಕಾರಿರುವ ವಿಪಕ್ಷ ನಾಯಕ ಆರ್. ಅಶೋಕ್ , ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ? ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯೋದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ? ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪುರಸಭೆಯಿಂದ ಅನುಮತಿ ಪತ್ರ ಪಡೆಯಲಾಗಿದೆ. ಬ್ಯಾನರ್, ಧ್ವಜ ಕಟ್ಟಲು ಪುರಸಭೆಗೆ ಜಾಹೀರಾತು ತೆರಿಗೆ ಕಟ್ಟಿ ರಸೀದಿ ಪಡೆಯಲಾಗಿದೆ ಎಂದಿದ್ದಾರೆ. ಇಷ್ಟಾದರೂ ರಾತ್ರೋರಾತ್ರಿ ಕೇಸರಿ ಬ್ಯಾನರ್, ಧ್ವಜಗಳನ್ನು ತೆರವುಗೊಳಿಸಿದ್ದೀರಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ತಾವೇನು ಚಿತ್ತಾಪುರದ ನಿಜಾಮ ಅಂದುಕೊಂಡಿದ್ದೀರೋ ಅಥವಾ ರಜಾಕರ್ ಅಂದುಕೊಂಡಿದ್ದೀರೋ? ಎಂದು ವಾಗ್ದಳಿ ಮಾಡಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ವಿಷ ಕಾರಿದರೆ ನಕಲಿ ಗಾಂಧಿಗಳನ್ನು ಮೆಚ್ಚಿಸಿ ಏನೋ ಆಗಿಬಿಡಬಹುದು, ಚಿತ್ತಾಪುರ ರಿಪಬ್ಲಿಕ್ ಮಾಡಿಕೊಂಡುಬಿಡಬಹುದು ಎಂಬ ಕನಸು ಕಾಣಬೇಡಿ. ಈ “ತುರ್ತು ಪರಿಸ್ಥಿತಿ” ಆಟ ಜಾಸ್ತಿ ದಿನ ನಡೆಯೋದಿಲ್ಲ ಎಂದು ಹೇಳಿದ್ದಾರೆ.
ನಾಳೆ ಕಲಬುರಗಿ ಜಿಲ್ಲೆಯ ಸಚಿವ ಪ್ರಿಯಾಂಕ್ ಕ್ಷೇತ್ರ ಚಿತ್ತಾಪುರದಲ್ಲಿ ನಾಳೆ ಆರ್‌ಎಸ್‌ಎಸ್ ಪಥಸಂಚಲನ ನಡೆಯಲಿದೆ. ಹೀಗಾಗಿ ಪಥಸಂಚಲನಕ್ಕೆ ಭಗವಾ ಧ್ವಜಗಳು, ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಆದರೆ ಪರವಾನಗಿ ಇಲ್ಲದೆ ಅಳವಡಿಸಲಾಗಿದೆ ಎಂದು ತಡರಾತ್ರಿ ಚಿತ್ತಾಪುರ ಪುರಸಭೆ ಅಧಿಕಾರಿಗಳಿಂದ ತೆರವು ಮಾಡಲಾಗಿದೆ. ಸದ್ಯ ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
