ಸಿಇಓ ಮತ್ತು ಪಿಡಿಓಗಳಿಗೆ ಖಡಕ್‌ ಸೂಚನೆ ನೀಡಿದ ಪ್ರಿಯಾಂಕ್‌ ಖರ್ಗೆ …..!

ಬೆಂಗಳೂರು:

    ಸರ್ಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ವಾರಕ್ಕೊಮ್ಮೆ ಕಡ್ಡಾಯವಾಗಿ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಸೂಚನೆ ನೀಡಿದರು.

    ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಚಿವರು ನಿನ್ನೆ ಪರಿಶೀಲನಾ ಸಭೆ ನಡೆಸಿದರು.

    ಗ್ರಾಮೀಣ ಭಾಗದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರ ಪಾತ್ರವಹಿಸಿರುವ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಆಶಯ ಹಾಗೂ ಅವುಗಳ ಅಗತ್ಯತೆ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿದ್ದಲ್ಲಿ ಕಾರ್ಯಕ್ರಮಗಳನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸಲು ಅನುಕೂಲವಾಗಬಲ್ಲದು.

    ಕೆಲವು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರದ ಆದೇಶ ಸೂಚನೆಗಳಿಗೆ ಮಹತ್ತ್ವ ನೀಡದೆ, ತಮ್ಮದೆ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಗರಂ ಆದರು. ಈ ವೇಳೆ ಸರ್ಕಾರದ ಆದೇಶಗಳನ್ನು ಪಾಲಿಸದೇ ಇರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
   ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ ಇರುವ ಇಲಾಖಾ ತನಿಖೆಗಳು ಹಾಗೂ ಲೋಕಾಯುಕ್ತ ತನಿಖೆಗಳ ಸಂಬಂಧದಲ್ಲಿ ತ್ವರಿತ ಕ್ರಮ ಆಗದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ವಿಳಂಬ ಮಾಡದೆ ಕ್ರಮ ಕೈಗೊಂಡು ಪ್ರಕರಣಗಳಿಗೆ ಅಂತ್ಯ ಹಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
   253 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, 130 ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಇತರ 32 ಸಿಬ್ಬಂದಿ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇಲಾಖಾ ತನಿಖೆ ಬಾಕಿಯಿದೆ.14 ಹಾಗೂ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ಪರಿಶೀಲಿಸಿದ ಸಚಿವರು ಕೆಲವು ಜಿಲ್ಲೆಗಳಲ್ಲಿ ಪ್ರಗತಿ ಕುಂಠಿತವಾಗಿರುವುದನ್ನು ಗಮನಿಸಿ ತಕ್ಷಣವೆ ಕಾಮಗಾರಿಗಳನ್ನು ಚುರುಕುಗೊಳಿಸಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಿದರು.
   ಸುಸಜ್ಜಿತ ಕಟ್ಟಡಗಳನ್ನು ಹೊಂದಿಲ್ಲದ ಗ್ರಾಮ ಪಂಚಾಯತಿ ಕಚೇರಿಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ತಲಾ 20 ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಕಟ್ಟಡ ನಿರ್ಮಾಣದ ಪ್ರಗತಿಯನ್ನು ಸಚಿವ ಪ್ರಿಯಾಂಕ್‌ ಖರ್ಗೆ ಪರಿಶೀಲಿಸಿದರು. 247 ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಮಂಜಾರಾತಿ ನೀಡಲಾಗಿದ್ದು ಈ ಪೈಕಿ 283 ಕಟ್ಟಡಗಳು ನಿರ್ಮಾಣಗೊಂಡಿವೆ, 151 ಕಟ್ಟಡಗಳ ನಿರ್ಮಾಣ ವಿವಿಧ ಹಂತಗಳಲ್ಲಿವೆ, 22 ಗ್ರಾಮಗಳಲ್ಲಿ ನಿವೇಶನ ಲಭ್ಯವಾಗಬೇಕಾಗಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು.
   
    ರಾಜ್ಯದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ 46655 ಸಿಬ್ಬಂದಿಯಿದ್ದು, ಇಲ್ಲಿಯವರೆವಿಗೂ ಶೇ 63ರಷ್ಟು ಮಂದಿ ಮಾತ್ರ ಇ-ಹಾಜರಿಯನ್ನು ಬಳಸುತ್ತಿರುವುದನ್ನು ಗಮನಿಸಿದ ಸಚಿವರು ಕೂಡಲೇ ನೂರಕ್ಕೆ ನೂರರಷ್ಟು ಸಿಬ್ಬಂದಿಯನ್ನು ಇ ಹಾಜರಾತಿ ತೆಕ್ಕೆಗೆ ತರಲು ಹೇಳಿದರಲ್ಲದೆ, ಈ ವ್ಯವಸ್ಥೆಗೆ ಬಾರದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link