ವಿಜಯೇಂದ್ರ ಏನು ಸುಪ್ರೀಂ ಕೋರ್ಟಾ? ನಾನು ರಾಜೀನಾಮೆ ಕೊಡಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು:

    ನನ್ನ ರಾಜೀನಾಮೆ  ಕೇಳಲು ವಿಜಯೇಂದ್ರ ಸುಪ್ರೀಂ ಕೋರ್ಟಾ? ಯಾರೆಷ್ಟೇ ಚೀರಾಡಲಿ, ಬೇಕಿದ್ದರೆ ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

    ಕಲಬುರಗಿಯ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಂಬಂಧಿಸಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಒತ್ತಡದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಗರು ವಿನಾಕಾರಣ ಆರೋಪ ಮಾಡುವುದಕ್ಕಿಂತ ಯಾವುದಾದರೂ ದಾಖಲೆ ಇದ್ದರೆ ತೋರಿಸಿ ಮಾತನಾಡಲಿ ಎಂದಿದ್ದಾರೆ.

  ಬ.ವೈ ವಿಜಯೇಂದ್ರ ವಿರುದ್ಧ ಮನಿ ಲ್ಯಾಂಡರಿಂಗ್​ ಕೇಸ್ ದಾಖಲಾಗಿದೆ, ವಿಜಯೇಂದ್ರ ಯಾಕೆ ರಾಜೀನಾಮೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲೇ ಬಿ.ವೈ.ವಿಜಯೇಂದ್ರ ಅವರ ಮಾತಿಗೆ ಕಿಮ್ಮತ್ತಿಲ್ಲ, ಉಳಿದವರು ಯಾಕೆ ಅವರ ಮಾತಿಗೆ ಕಿಮ್ಮತ್ತು ಕೊಡಬೇಕು ಎಂದು ಪ್ರಶ್ನೆ ಮಾಡಿದರು.

  ರಾಜು ಕಪನೂರ್ ನನ್ನ ಆಪ್ತ ಅಲ್ಲ ಎಂದು ನಾನು ಹೇಳಿಯೇ ಇಲ್ಲ. ರಾಜು ಕಪನೂರು ಕಾಂಗ್ರೆಸ್ ಸೇರುವ​ ಮೊದಲು ಬಿಜೆಪಿಯಲ್ಲಿದ್ದರು, ಬಿಜೆಪಿ ಎಸ್​ಸಿ ಮೋರ್ಚಾ ಅಧ್ಯಕ್ಷರಾಗಿದ್ದರು ಎಂದರು. ಕಲಬುರಗಿ ಮುತ್ತಿಗೆಗೆ ಎಷ್ಟು ಜನ ಬರ್ತೀರಿ ಅಂತಾ ಮೊದಲೇ ಹೇಳಿ, ಅಷ್ಟು ಜನರಿಗೆ ಟೀ ವ್ಯವಸ್ಥೆ ಮಾಡ್ತೇವೆ, ಇಲ್ಲದಿದ್ದರೆ ನೀರನ್ನೂ ಕೊಟ್ಟಿಲ್ಲ ಅಂತಾ ಪ್ರತಿಭಟನೆ ಮಾಡ್ತೀರಾ ಎಂದು ಹೇಳಿದರು.

  ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಬೀದರ್‌ನ 26 ವರ್ಷದ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.27ರಂದೇ ಸಚಿವ ಪ್ರಿಯಾಂಕ್ ಖರ್ಗೆ ಗೃಹ ಸಚಿವ ಡಾ. ಪರಮೇಶ್ವರ್​ಗೆ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿ ಸಂಶಯ ಮೂಡಿಸುವಂಥ ಹಲವು ವಿಷಯ ಇವೆ. ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸತ್ಯಾಂಶ ತಿಳಿಯಲು ಸ್ವತಂತ್ರ ತನಿಖಾ ಸಂಸ್ಥೆಯ ಸಿಐಡಿಗೆ ವಹಿಸಬೇಕೆಂದು ಮನವಿ ಮಾಡಲಾಗಿದೆ. 

  ಗುತ್ತಿಗೆದಾರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿಯವರು ಮಾಡಿರುವ ಆರೋಪ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಹೇಳಿದರು.

   ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಮೇಲೆ ಅನವಶ್ಯಕವಾಗಿ ಆಪಾದನೆ ಮಾಡುವುದು ಯಾವುದೇ ಸರ್ಕಾರಕ್ಕು ಸರಿ ಇರುವುದಿಲ್ಲ.‌ ಡೆತ್‌ನೋಟ್‌ನಲ್ಲಿ ಅವರ ಹೆಸರು ಕೂಡ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.ಸಚಿವರ ಹೆಸರನ್ನು ತಂದು, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು.

  ತನಿಖೆಯ ವರದಿ ಬಂದ ನಂತರ ಏನು‌ ಎಂಬುದನ್ನು ಹೇಳೋಣ. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಅನವಶ್ಯಕವಾಗಿ ಅವರ ಹೆಸರನ್ನು ತೆಗೆದುಕೊಂಡು ರಾಜೀನಾಮೆ ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದರು

  ಸಿಬಿಐಗೆ ವಹಿಸುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಆಗುವುದಿಲ್ಲ. ಸಿಐಡಿ ಸಮರ್ಥವಾಗಿದೆ.‌ ಅನೇಕ ಪ್ರಕರಣಗಳಲ್ಲಿ ಸಿಐಡಿ ತನಿಖೆಯ ವರದಿ ಬಂದಿದೆಯಲ್ಲವೇ? ಬಿಜೆಪಿಯವರು ಹೇಳಿದ್ದೆಲ್ಲ ಕೇಳುವುದಿಲ್ಲ. ಸಕಾರಾತ್ಮಕವಾಗಿ ಸಲಹೆ, ಸೂಚನೆ ನೀಡಿದರೆ ಕೇಳುತ್ತೇವೆ. ಅನವಶ್ಯಕವಾಗಿ ಎಲ್ಲದರಲ್ಲು ರಾಜಕೀಯ ಮಾಡಲು ಹೋದರೆ ಕೇಳುವುದಿಲ್ಲ ಎಂದರು.

Recent Articles

spot_img

Related Stories

Share via
Copy link