ಬೆಂಗಳೂರು
ಭೂಮಿಯ ಮೇಲಿರುವ ಸೀಮಿತ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಉತ್ತಮ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಲು ನಮ್ಮ ಮುಂದಿರುವ ಏಕೈಕ ಮಾರ್ಗವೆಂದರೆ ವರ್ತುಲ ಆರ್ಥಿಕತೆಗೆ (ಸರ್ಕು್ಯಲರ್ ಎಕಾನಮಿ) ಪ್ರಾಮುಖ್ಯತೆ ನೀಡುವುದು. ಇದರಿಂದ ನಾವು ತ್ಯಾಜ್ಯ ಉತ್ಪಾದನೆಯ ಮೇಲೆ ನಿಯಂತ್ರಣ ಹೇರಬಹುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅವರು ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಇಂದು ಏರ್ಪಡಿಸಿದ್ದ ವರ್ತುಲ ಆರ್ಥಿಕತೆ ಕುರಿತ ದುಂಡುಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಾರಂಪರಿಕವಾಗಿ ನಮಗೆ ಬಂದಿರುವ ಪರಿಸರ ಸಂಪತ್ತನ್ನು ಜತನವಾಗಿ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ ಸಚಿವರು, ಸಂಪನ್ಮೂಲಗಳ ಬಳಕೆಯಿಂದ ತ್ಯಾಜ್ಯ ಮಾಲಿನ್ಯ ಮತ್ತು ಜೈವಿಕ ವೈವಿಧ್ಯತೆಯ ನಷ್ಟದಂತಹ ಜಾಗತಿಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ ನಾವು ಭೂಮಿಯ ಸಂಪನ್ಮೂಲಗಳನ್ನು ಹೊರತೆಗೆದು ಅದರಿಂದ ಉತ್ಪನ್ನಗಳನ್ನು ತಯಾರಿಸುತ್ತೇವೆ, ನಂತರ ಅವುಗಳನ್ನು ತ್ಯಾಜ್ಯವಾಗಿ ಎಸೆಯುತ್ತೇವೆ. ಈ ಕ್ರಿಯೆಗಳು ಸಂಪನ್ಮೂಲದ ದೀರ್ಘಾಯುಷ್ಯಕ್ಕೆ ಕುಂದು ತರುತ್ತದೆ . ಇದು ಕೇವಲ ಭೂಮಿಗಷ್ಟೇ ಅಲ್ಲದೇ, ನಮ್ಮ ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಚ್ಚಾ ವಸ್ತುಗಳ ಕನಿಷ್ಠ ಬಳಕೆ ಮಾಡುವುದು, ಉತ್ಪನ್ನಗಳು ಮತ್ತು ಘಟಕಗಳ ಗರಿಷ್ಠ ಮರುಬಳಕೆ ಮಾಡುವುದು ಹಾಗೂ ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ಕಚ್ಚಾ ವಸ್ತುಗಳ ಮರುಬಳಕೆ ಮಾಡುವುದು ನಮ್ಮ ಮುಂದಿರು ಮೂರು ಸವಾಲುಗಳಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು.
ಈಗ ನಾವು ಉತ್ಪಾದಿಸಿದ ವಸ್ತುಗಳ ಸಂಪೂರ್ಣ ಬಳಕೆಯ ನಂತರ ಮಾಡುತ್ತಿರುವ ಮರುಬಳಕೆಯ ಪ್ರಮಾಣ ಕೇವಲ ಶೇ.7.2 ಮಾತ್ರ ಎಂಬ ವಿಷಯವನ್ನು ಹಂಚಿಕೊAಡ ಸಚಿವರು, ಈಗಾಗಲೇ ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಲಭ್ಯವಿರುವ ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ವರದಿಗಳು ಸೂಚಿಸುತ್ತವೆ ಎಂದು ಹೇಳಿದರು.
ಭಾರತ ತನ್ನ ಅಸ್ತಿತ್ವದಲ್ಲಿರುವ ಐಟಿ ಪ್ರಾಬಲ್ಯ ಮತ್ತು ತಾಂತ್ರಿಕ ಪ್ರತಿಭೆಗಳನ್ನು ಸದ್ಬಳಕೆ ಮಾಡಿಕೊಂಡರೆ ಜಾಗತಿಕ ವರ್ತುಲ ಆರ್ಥಿಕ ಕ್ರಾಂತಿಯ ಮುಂಚೂಣಿಯಲ್ಲಿ ನಿಲ್ಲಬಹುದಾಗಿದೆ, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಅತ್ಯಾಧುನಿಕ ಆವಿಷ್ಕಾರಗಳನ್ನು ರೂಪಿಸಲು ಭಾರತವು ಸಕಲ ರೀತಿಯಲ್ಲಿ ಸಿದ್ಧವಾಗಿದೆ ಎಂದು ತಿಳಿಸಿದ ಸಚಿವ ಖರ್ಗೆ ಅವರು, ಕರ್ನಾಟಕ ಸರ್ಕಾರ ವರ್ತುಲ ಆರ್ಥಿಕತೆಯ ಮಹತ್ವವನ್ನು ಅರ್ಥಮಾಡಿಕೊಂಡಿದ್ದು, ಅದನ್ನು ರಾಜ್ಯದ ಪ್ರಮುಖ ನೀತಿಗಳಲ್ಲಿ ಸೇರಿಸಿದೆ ಎಂದರು.
ಸರ್ಕಾರದ ಸ್ಟಾರ್ಟ್ ಅಪ್ ನೀತಿ, ಕರ್ನಾಟಕ ರಾಜ್ಯ ನಗರ ಘನ ತ್ಯಾಜ್ಯ ನಿರ್ವಹಣಾ ನೀತಿ, ಕರ್ನಾಟಕ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ, ಹಾಗೂ ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳಲ್ಲಿ ವರ್ತುಲ ಆರ್ಥಿಕತೆಯ ಆಶಯಗಳನ್ನು ಹೊಂದಾಣಿಕೆ ಮಾಡಲಾಗಿದೆ ಎಂದೂ ತಿಳಿಸಿದರು. ನಾವು ಹೆಚ್ಚು ಜ್ಞಾನವನ್ನು ಹಂಚಿಕೊಂಡರೆ, ಪೀಳಿಗೆಗಾಗಿ ಹೆಚ್ಚಿನದನ್ನು ಉಳಿಸಲು ಸಾಧ್ಯ ಮತ್ತು ಹೆಚ್ಚು ಉಳಿಸಿದರೆ ಹೆಚ್ಚು ಬದುಕಲು ಸಾಧ್ಯ ಮತ್ತು ಪ್ರಪಂಚದ ಮುಂದಿನ ಭವಿಷ್ಯಕ್ಕೆ ಇದರಿಂದ ಒಳಿತಾಗಲಿದೆ ಎಂದೂ ಸಚಿವರು ಅಭಿಪ್ರಾಯಪಟ್ಟರು.
ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕರಾದ ಮೀನಾ ನಾಗರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ