ನವದೆಹಲಿ:
ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಯ ಮೇಲೆ ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ವೈಮಾನಿಕ ದಾಳಿ ನಡೆಸಿದೆ. ದಾಳಿಯಲ್ಲಿ 9 ಉಗ್ರ ನೆಲೆಗಳು ಧ್ವಂಸ ಮಾಡಿದೆ. ಆಪರೇಷನ್ ಸಿಂಧೂರ್ ನಡೆಸಿದ್ದಕ್ಕಾಗಿ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ನಮ್ಮ ಸೈನ್ಯದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮ ಧೈರ್ಯಶಾಲಿ ಸೈನಿಕರು ನಮ್ಮ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ರಕ್ಷಿಸುತ್ತಾರೆ. ದೇವರು ಅವರನ್ನು ರಕ್ಷಿಸಲಿ ಮತ್ತು ತಾಳ್ಮೆ ಮತ್ತು ಶೌರ್ಯದಿಂದ ಸವಾಲುಗಳನ್ನು ಎದುರಿಸಲು ಅವರಿಗೆ ಅಪಾರ ಧೈರ್ಯವನ್ನು ನೀಡಲಿ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ ಬಳಿಕ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಪರೇಷನ್ ಸಿಂಧೂರ್ ನಡೆಸಿದ್ದಕ್ಕಾಗಿ ಸೇನೆಯನ್ನು ಶ್ಲಾಘಿಸಿದ್ದಾರೆ. “ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್ ಎಂದು ಅವರು ಘೋಷಣೆ ಬರೆದಿದ್ದಾರೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಯಾರಾದರೂ ಭಾರತೀಯ ನಾಗರಿಕರಿಗೆ ಬೆದರಿಕೆ ಹಾಕಿದರೆ, ಅವರಿಗೆ ಇದೇ ಗತಿ ಎದುರಾಗುತ್ತದೆ. ನಮ್ಮ ಸೇನೆ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಏಪ್ರಿಲ್ 22 ರ ರಾತ್ರಿ, ನಾವು (ಕಾಂಗ್ರೆಸ್) ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದು ಹೇಳಿದ್ದೆವು. ಯಾರಾದರೂ ಭಾರತಕ್ಕೆ ಬೆದರಿಕೆ ಹಾಕಿದರೆ, ಸರ್ಕಾರ ನಿರ್ಧರಿಸುವುದನ್ನು ನಾವು ಬೆಂಬಲಿಸುತ್ತೇವೆ. ದೇಶ ಒಗ್ಗಟ್ಟಿನಿಂದ ನಿಂತಿದೆ” ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕೂಡ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸಾಧನೆಯನ್ನು ಶ್ಲಾಘಿಸಿದರು, ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟು ಈ ಸಮಯದ ಅಗತ್ಯವಾಗಿದೆ ಎಂದು ಹೇಳಿದರು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಅವರ ದೃಢನಿಶ್ಚಯ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ ಎಂದು ಹೇಳಿದ್ದಾರೆ.








