ವಾಷಿಂಗ್ಟನ್
ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆ ಟಿಕ್‌ಟಾಕ್ ನ್ನು ಜನವರಿ 19ರೊಳಗೆ ನಿರ್ಬಂಧಿಸಲು ಕಡ್ಡಾಯಗೊಳಿಸುವ ಕಾನೂನನ್ನು ತೆರವುಗೊಳಿಸುವಂತೆ ಅಥವಾ ಅಮೆರಿಕದಲ್ಲಿ ಕಾರ್ಯಾಚರಣೆಗೆ ಮತ್ತೊಂದು ಕಂಪನಿಗೆ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ನ್ಯಾಯ ಒದಗಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಗಡುವಿನ ಸಮಯ ಸಮೀಪಿಸುತ್ತಿರುವಂತೆಯೇ ಈ ವಿವಾದವನ್ನು ಬಗೆಹರಿಸಲು ಟ್ರಂಪ್ ಅವರೇ ಮುಂದಾಗಿದ್ದಾರೆ. ಮುಂದಿನ ತಿಂಗಳು ನ್ಯಾಯಾಲಯದಲ್ಲಿ ಈ ವಿಚಾರ ಬರಲಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಿಕ್‌ಟಾಕ್ ನಿಷೇಧವನ್ನು ಅಧ್ಯಕ್ಷ ಟ್ರಂಪ್ ವಿರೋಧಿಸುತ್ತಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಅಮೆರಿಕದಲ್ಲಿ 170 ಮಿಲಿಯನ್ ಟಿಕ್ ಟಾಕ್ ಬಳಕೆದಾರರಿದ್ದಾರೆ. ಅವರ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆ ರಕ್ಷಣೆ ನಿಟ್ಟಿನಲ್ಲಿ ಈ ಸಮಸ್ಯೆ ಪರಿಹರಿಸಲು ಕೋರಲಾಗಿದೆ. ಅಲ್ಲದೇ, ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಡೊನಾಲ್ಡ್ ಟ್ರಂಪ್ ಅತ್ಯಂತ ಪ್ರಬಲ ವ್ಯಕ್ತಿಯಾಗಿದ್ದಾರೆ. ಟಿಕ್ ಟಾಕ್ ನಲ್ಲಿ ಅವರು 14.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಅವರೊಂದಿಗೆ ಸಕ್ರಿಯವಾಗಿ ಸಂವಹನ ನಡೆಸುತ್ತಾರೆ.
ಪ್ರಮುಖ ರಾಜಕೀಯ ಭಾಷಣ ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಟಿಕ್‌ಟಾಕ್‌ನ ಪ್ರಾಮುಖ್ಯತೆಯನ್ನು ಪರಿಗಣಿಸಿ ಅದರ ನಿಷೇಧ ತೆರವಿಗೆ ಮುಂದಾಗಿರುವುದಾಗಿ ತಿಳಿದುಬಂದಿದೆ.