ಮಂಡ್ಯ:
ಮಂಡ್ಯ ಜಿಲ್ಲೆಯಲ್ಲಿ ಉಂಟಾಗಿರುವ ಕೋಮುಗಲಭೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಗಣಪತಿ ಉತ್ಸವದ ಮೆರವಣಿಗೆ ವೇಳೆ ಬುಧವಾರ ರಾತ್ರಿ ಕೆಲವು ಜನರು ಕಲ್ಲು ತೂರಾಟ ನಡೆಸಿದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ಸೃಷ್ಟಿಸಿದ್ದರು. ಬಳಿಕ ಮಚ್ಚು, ಲಾಂಗ್ ತೋರಿಸಿ, ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದರು. ಈ ಕೃತ್ಯಕ್ಕೆ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿ, ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದರು.
ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಗಣಪತಿ ಮಂಟಪ ಇದ್ದ ಬದ್ರಿಕೊಪ್ಪಿನಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬದ್ರಿಕೊಪ್ಪಲು ಹೆಬ್ಬಾಗಿಲಿನಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಬಂಧನದ ಭೀತಿಯಿಂದ ಇಲ್ಲಿನ ಯುವಕರು ಗ್ರಾಮವನ್ನೇ ತೊರೆದು ಹೋಗುತ್ತಿದ್ದಾರೆ. ಹೀಗಾಗಿ, ಬದ್ರಿಕೊಪ್ಪಲು ಗ್ರಾಮ ಬಿಕೋ ಎನ್ನುತ್ತಿದೆ.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ದರ್ಗಾ ಬಳಿ ನಡೆದ ಗಲಭೆಯಲ್ಲಿ 20ಕ್ಕೂ ಅಧಿಕ ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು. ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂದೂಗಳ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದಂತೆ ಮುಸ್ಲಿಮರ ಗುಂಪು ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಗಲಾಟೆಯೆಬ್ಬಿಸಿದ್ದರು. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು.
ಈಗಾಗಲೇ ಈ ಕೋಮು ಗಲಭೆಗೆ ಸಂಬಂಧಿಸಿದಂತೆ ನಾಗಮಂಗಲ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಅವರನ್ನು ಅಮಾನತು ಮಾಡಲಾಗಿದೆ. ಈ ಗಲಭೆ ಸಂಬಂಧ 150 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.