ತಿಪಟೂರು :
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ರೈತರ ಶ್ರಮಿಕರ ದಿನ ದಲಿತರ ಹಾಗೂ ಎಲ್ಲಾ ವರ್ಗಗಳ ಹೊರಾಟಗಳನ್ನು ಹತ್ತಿಕ್ಕಿ ಸರ್ವಾಧಿಕಾರ ಅಡಳಿತ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ಕಿಡಿಕಾರಿದರು.
ನಗರದ ತಾಲೂಕು ಕಚೇರಿ ಮುಂಭಾಗ ರಾಜ್ಯ ರೈತ ಸಂಘ, ಬೆಲೆ ಕಾವಲು ಸಮಿತಿ, ಸಿ.ಐ.ಟಿ.ಯು ಪ್ರಾಂತ್ಯ ರೈತ ಸಂಘ ಹಾಗು ಸಮಾನ ಮನಸ್ಕ ಸಂಘಟನೆಗಳು ಸೇರಿ, ದೆಹಲಿ, ಹರಿಯಾಣ ಮತ್ತು ದೇಶದ ಹಲವಾರು ಕಡೆ ರೈತರ ಹೋರಾಟ ಹತ್ತಿಕ್ಕಲು ಲಾಠಿಚಾರ್ಜ್, ಅಶ್ರುವಾಯು ಮತ್ತು ಟಿಯರ್ ಗ್ಯಾಸ್ ಬಳಸಿ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸರ್ಕಾರಗಳ ಈ ನಡೆಯನ್ನು ಖಂಡಿಸಿದರು.
ಸ್ವತಂತ್ರ ಪೂರ್ವದಿಂದಲೂ ಭಾರತೀಯರು ನಾಯಕತ್ವದಗುಣ ಬೆಳಸಿಕೊಂಡು ಹೊರಾಟದ ಮುಖಾಂತರ ಸ್ವಾತಂತ್ರ್ಯ ತಂದುಕೊಟ್ಟರು. ನಂತರದ ದಿನಗಳಲ್ಲಿ ಕೂಡಾ ರೈತರ ಶ್ರಮಿಕರ, ಕಾರ್ಮಿಕರ, ದಲಿತರ ಹೋರಾಟಗಳು ಮುಂಚೂಣಿಯಲ್ಲಿ ಬಂದು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರಗಳನ್ನು ಎಚ್ಚರಿಸಿ ಜಯ ಸಾಧಿಸಿದ್ದನ್ನು ನೋಡಿದ್ದೇವೆ. ಆದರೆ ಈಗಿನ ಬಿಜೆಪಿ ಸರಕಾರ ಹೋರಾಟ ಮಾಡುವವರನ್ನು ನಿಯಂತ್ರಿಸುತ್ತಿದೆ ಎಂದರು.
ಬೆಲೆ ಕಾವಲು ಸಮಿತಿರೈತ ಹೋರಾಟಗಾರ ಶ್ರೀಕಾಂತ್ ಮಾತನಾಡಿ, ರೈತರ ಮೇಲೆ ಪ್ರಮಾಣ ಮಾಡಿ ನಾನೊಬ್ಬ ರೈತನ ಮಗ ರೈತರಿಗೆ ಯಾವಾಗಲೂ ದನಿಯಾಗಿರುತ್ತೇನೆ ಎಂದು ಹೇಳಿದ ನಮ್ಮ ಮುಖ್ಯಮಂತ್ರಿಯವರಿಂದ ಹಿಡಿದು, ಕೇವಲ ಖಾಸಗಿ ಕಂಪನಿಗಳಿಂದ ಮಾತ್ರ ದೇಶ ಉದ್ದಾರವಾಗುತ್ತದೆ ಎಂದುಕೊಂಡಿರುವ ಪ್ರಧಾನ ಮಂತ್ರಿಗಳು ತಾವು ಅಧಿಕಾರಕ್ಕೆ ಬಂದ ದಿನದಿಂದಲೂ ರೈತರಿಗೆ ಯಾವುದೇ ಹೊಸ ಯೋಜನೆ ತಂದಿಲ್ಲಾ, ಕೇವಲ ಕಂಪೆನಿಗಳ ಉದ್ದಾರಕ್ಕೆ ಮಾತ್ರ ನಾನು ಪ್ರಧಾನಿ ಯಾಗಿರುವುದು ರೈತರು ಹೋರಾಟ ಮಾಡಿದರೆ ಅವರನ್ನು ಬಗ್ಗು ಹೊಡೆಯಲು ಏನೇನು ಮಾಡಬೇಕೊ ಅದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಕೇಂದ್ರ ಸರ್ಕಾರಕ್ಕೆ ರೈತಪರ ಹೋರಾಟಗಾರರ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಹಸಿರು ಸೇನೆ ಅಧ್ಯಕ್ಷ ತಿಮ್ಮಲಾಪುರ ದೇವರಾಜು, ಮನೋಹರ್ ಪಟೇಲ್, ಮೋಹನ್ ಸಿಂಗ್ವಿ, ಸೈಫುಲ್ಲಾ, ನಾಗತೀಹಳ್ಳಿ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ