ಹೇಮಾವತಿ ನೀರಿಗೆ ಒತ್ತಾಯಿಸಿ ಗ್ರಾಪಂ ಚುನಾವಣೆ ಬಹಿಷ್ಕಾರ

 ಎಂ.ಎನ್.ಕೋಟೆ : 

      ಗುಬ್ಬಿ ತಾಲ್ಲೂಕಿನ ಮಠದಹಳ್ಳ ಕೆರೆ, ಶೇಷೇನಹಳ್ಳಿ ಹಾಗೂ ಕುರುಬರಹಳ್ಳಿ ಕೆರೆಗೆ ಕಳೆದ 20 ವರ್ಷಗಳಿಂದ ಹೇಮೆ ಹರಿಸುವ ಭರವಸೆ ಹುಸಿಯಾದ ಹಿನ್ನಲೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿಯ ಒಟ್ಟು 33 ಗ್ರಾಮಗಳ ಮತದಾರರು ಹಾಗೂ ಉಮೇದುವಾರಿಕೆ ಸಲ್ಲಿಸುವ ಆಕಾಂಕ್ಷಿಗಳು ಒಕ್ಕೊರಲಿನ ಹೋರಾಟಕ್ಕೆ ಮುಂದಾಗಿದ್ದು, ಈ ಸಂಬಂಧ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ ತಾಲ್ಲೂಕು ಆಡಳಿತದ ಪ್ರಯತ್ನ ವಿಫಲವಾದ ಘಟನೆ ಭಾನುವಾರ ನಡೆಯಿತು.

     ಎರಡು ದಿನಗಳಿಂದ ನಿರಂತರ ಸಭೆಗಳನ್ನು ನಡೆಸಿದ ಗ್ರಾಮಸ್ಥರು, ಕುಡಿಯುವ ನೀರಿನ ಯೋಜನೆಗೆ ಮೊದಲು ಚಾಲನೆ ಸಿಕ್ಕ ನಂತರ ಚುನಾವಣೆ ನಡೆಸಲಿ ಎಂಬ ನಿರ್ಧಾರ ಕೈಗೊಂಡು ನಾಮಪತ್ರ ಸಲ್ಲಿಕೆಯ ಮೊದಲ ದಿನದಿಂದ ಅಂತಿಮ ದಿನದವರೆಗೆ ಪ್ರತಿನಿತ್ಯ ಮಂಚಲದೊರೆ ಮತ್ತು ಅಂಕಸಂದ್ರ ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲೇ ಮೌನ ಹೋರಾಟವನ್ನು ನಡೆಸಲು ನಿರ್ಧರಿಸಿದ್ದಾರೆ. ಚುನಾವಣಾ ಪ್ರಕ್ರಿಯೆಗೆ ಯಾವುದೇ ರೀತಿ ತೊಂದರೆ ನೀಡುವುದಿಲ್ಲ. ಅಧಿಕಾರಿಗಳು ಅವರ ಕೆಲಸ ನಡೆಸಲಿ ಆದರೆ ನಾಮಪತ್ರ ಸಲ್ಲಿಕೆಗೆ ಯಾವ ಆಕಾಂಕ್ಷಿಗಳು ಮುಂದಾಗುವುದಿಲ್ಲ. ಪ್ರತಿಭಟನೆಯ ನೇತೃತ್ವವನ್ನು ಉಮೇದುವಾರಿಕೆ ಸಲ್ಲಿಸುವ ಆಕಾಂಕ್ಷಿಗಳೇ ನಡೆಸಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು.

      20 ವರ್ಷಗಳ ನಿರಂತರ ಹೋರಾಟದ ಫಲ ಮಠ ಕೆರೆಗೆ ನೀರು ಹರಿಸುವ ಯೋಜನೆಗೆ ಮೂರು ಬಾರಿ ಕ್ರಿಯಾಯೋಜನೆ ಸಿದ್ದವಾಗಿ ಒಮ್ಮೆ 13 ಕೋಟಿ ರೂಗಳು, ಮತ್ತೊಮ್ಮೆ 16 ಕೋಟಿ ರೂಗಳ ನಿಗದಿ ಮಾಡಲಾಗಿತ್ತು. ಆದರೆ ಭರವಸೆಯಾಗಿಯೇ ಉಳಿದ ಹಿನ್ನಲೆ ಮತ್ತೆ ನಿರಂತರ ಹೋರಾಟ ನಡೆಸಲಾಗಿ 2019 ರಲ್ಲಿ ಫಲ ದೊರೆತಿತ್ತು.

      25.65 ಕೋಟಿ ರೂಗಳ ಆಡಳಿತಾತ್ಮಕ ಅನುಮೋದನೆ ದೊರೆಕಿದರೂ ಕಾಮಗಾರಿ ಆರಂಭಕ್ಕೆ ನೂರೆಂಟು ವಿಘ್ನವನ್ನು ಮುಂದಿಟ್ಟು ಹೇಮಾವತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. ಜಿಲ್ಲೆಯಲ್ಲೇ ನೂರಾರು ಕೋಟಿ ರೂಗಳ ಹೇಮಾವತಿ ಕೆಲಸಗಳು ನಡೆದಿವೆ. ಪಕ್ಕದ ಚಿಕ್ಕನಾಯಕನಹಳ್ಳಿಯಲ್ಲಿ ಈಚೆಗೆ 250 ಕೋಟಿ ರೂಗಳ ಕೆಲಸ ಆರಂಭವಾಗಿದೆ. ಆದರೆ ಬಹು ವರ್ಷದ ಕನಾಸಾಗಿರುವ ಮಠ ಕೆರೆಗೆ ನೀರು ಹರಿಸಲು ಸರ್ಕಾರದ ಬಳಿ 25 ಕೋಟಿ ರೂಗಳು ಇಲ್ಲದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

      ಬರಪೀಡಿತ ಪ್ರದೇಶವಾಗಿರುವ ಹಾಗಲವಾಡಿ ಹೋಬಳಿ ಸಂಪೂರ್ಣ ಶಾಪಗ್ರಾಸ್ತ ಪ್ರದೇಶವಾಗಿದೆ. ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಈ ಭಾಗದ ಮತಗಳು ಮಾತ್ರ ಬಯಸುವ ಜನಪ್ರತಿನಿಧಿಗಳು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಯಾವ ಶಾಪ ನಮಗೆ ತಗುಲಿದೆ ತಿಳಿಯುತ್ತಿಲ್ಲ. ಮಠದಹಳ್ಳ ಕೆರೆ, ಶೇಷೇನಹಳ್ಳಿ ಕೆರೆ ಹಾಗೂ ಕುರುಬರಹಳ್ಳಿ ಕೆರೆಗೆ ನೀರು ಹರಿಸಿದಲ್ಲಿ ಇಡೀ ಹೋಬಳಿಯು ಚೇತರಿಕೆ ಕಾಣಿಸಿಕೊಳ್ಳತ್ತದೆ. ಈ ಬಗ್ಗೆ ಅಧಿಕಾರಿಗಳಿಗೂ ತಿಳಿದಿದೆ. ಆದರೂ ನಮ್ಮ ಕೆರೆಗಳ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಈ ನಿಟ್ಟಿನಲ್ಲಿ ಮತದಾರರು ಮತ್ತು ಆಕಾಂಕ್ಷಿಗಳು ಒಗ್ಗಟ್ಟಾಗಿ ನಿರ್ಧರಿಸಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕೂಡಲೇ ಅಧಿಕಾರಿಗಳು ಸರ್ಕಾರದ ಗಮನ ಸೆಳೆದು ಹೇಮಾವತಿ ಹರಿಸುವ ಕಾಮಗಾರಿಗೆ ಚಾಲನೆ ನೀಡಬೇಕು. ಇಲ್ಲವಾದಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯಾದ ಬಳಿಕ ಇಡೀ 33 ಗ್ರಾಮಸ್ಥರು ತಂಡೋಪತಂಡವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಎಚ್ಚರಿಸಿದರು.

      ಸಭೆಗೆ ಆಗಮಿಸಿದ ತಹಸೀಲ್ದಾರ್ ಮನವಿಪತ್ರ ಸ್ವೀಕರಿಸಿ ಮತದಾನದ ಹಕ್ಕು ಬಗ್ಗೆ ತಿಳಿಸಿ ಚುನಾವಣೆ ಬಹಿಷ್ಕಾರ ತೀರ್ಮಾನ ಕೈಬಿಡಲು ಮನವಿ ಮಾಡಿದರು. ಆದರೆ ಸಾರ್ವಜನಿಕರ ಆಕ್ರೋಶ ಅಧಿಕಾರಿಗಳ ಮನವಿಗೆ ಕರಗಲಿಲ್ಲ. ಕೇವಲ ಭರವಸೆ ಕೇಳಿ ಬೇಸತ್ತ ಹಿನ್ನಲೆ ನೀರು ಹರಿಸುವ ಕೆಲಸಕ್ಕೆ ಚಾಲನೆ ನೀಡಿದ್ದಲ್ಲಿ ಮಾತ್ರ ಬಹಿಷ್ಕಾರ ಹಿಂಪಡೆಯುವ ಮಾತುಗಳಾಡಿದ ಹಿನ್ನಲೆ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ಹೇಮಾವತಿ ಇಂಜಿನಿಯರ್ ಶಶಿಧರ್ ಸಿಬ್ಬಂದಿ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ನಡೆದರು.

      ಇದೇ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ರಾಮಕೃಷ್ಠಯ್ಯ ಹಾಗೂ ಚೇಳೂರು ಪಿಎಸ್ ಐ ವಿಜಯ್ ಕುಮಾರ್ ಸೂಕ್ತ ಬಂದೂಬಸ್ತ್ ವಹಿಸಿದ್ದರು.

      ಈ ಸಂದರ್ಭದಲ್ಲಿ ಮುಖಂಡರಾದ ರಮೇಶ್, ಬಾಬು, ಶಿವಣ್ಣ, ಸೋಮಣ್ಣ ಕರಿಯಪ್ಪ, ಸೋಮಶೇಖರ್, ಲಕ್ಷ್ಮೀಕಾಂತರಾಜು, ನವೀನ್‍ಕುಮಾರ್, ಅಶೋಕ್, ಕೃಷ್ಣಪ್ಪ, ನಾಗರಾಜು, ಮಂಜಣ್ಣ, ಕೆ.ಆರ್.ಗೌಡ, ನರಸಿಂಹಮೂರ್ತಿ, ಬದರಿನಾರಾಯಣ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link