ಬೆಂಗಳೂರು
ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಸಾವಿರಾರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ.
ಕಾಂಗ್ರೆಸ್ ಸರ್ಕಾರ ರಚನೆಗೂ ಮುನ್ನ ನೀಡಿದ ಆರು ಗ್ಯಾರಂಟಿ ಜಾರಿಗೆ ತರಲು ಆಗ್ರಹಿಸಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಪ್ರತಿಭಟನಾಕಾರರು ಆಗಮಿಸಲಿದ್ದಾರೆ. ಹಾಗಾದರೆ ರಾಜ್ಯ ಸರ್ಕಾರದ ಮುಂದೆ ಆಶಾ ಕಾರ್ಯಕರ್ತೆಯರು ಇಟ್ಟ ಬೇಡಿಕೆಗಳು ಯಾವವು ಎಂದು ತಿಳಿಯೋಣ.
ಸೇವಾ ನಿವೃತ್ತಿ ಪಡೆಯುವ 60 ವರ್ಷದ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ಮೂರು ಲಕ್ಷ ರೂ.ಗೆ ಹೆಚ್ಚಿಸುವುದು.
ಮೂರು ತಿಂಗಳುಗಳ ಕಾಲ ತೀವ್ರವಾದ ಅನಾರೋಗ್ಯ ಅಥವಾ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ರಾಜ್ಯ ಸರ್ಕಾರ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು.
ಹೆಚ್ಚುವರಿ ಕೆಲ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ಎರಡು ಸಾವಿರದಷ್ಟು ಗೌರವಧನವನ್ನು ಹೆಚ್ಚಿಗೆ ಮಾಡಬೇಕು.
ಪ್ರತೀ ವರ್ಷ ನೀಡುವ ಡೈರಿಯನ್ನು ನಿಗಧಿತ ಸಮಯಕ್ಕೆ ಒದಗಿಸಬೇಕು. ಕಳೆದ ಎರಡು ವರ್ಷದಿಂದ ನೀಡದಿರುವ ಸಮವಸ್ತ್ರಗಳನ್ನು ಒದಗಿಸಲು ಕೋಡಲೆ ಕ್ರಮ ಕೈಗೊಳ್ಳಬೇಕು.
ಸುವರ್ಣ ಆರೋಗ್ಯ ಟ್ರಸ್ಟ್‌ನ ಆರೋಗ್ಯ ವಿಮಾ ಯೋಜನೆಯಂತೆ ಐದು ಲಕ್ಷ ರೂ.ವರೆಗೆ ವಿವಿಧ ಕಾಯಿಲೆಗಳಿಗೆ ಯಚಿತ ಚಿಕಿತ್ಸೆಯನ್ನು ಆಶಾ ಮತ್ತು ಆಶಾ ಕುಟುಂಬಕ್ಕೆ ನೀಡಬೇಕು.
ಕಳೆದ ವರ್ಷ ಜನವರಿಯಲ್ಲಿ ಇದೇ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತೆಯರ ಪರ ನಿಂತು ಆಗಿನ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಐಇ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಅಂದಿನ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
“10 ದಿನ ಕಳೆದರೂ ಪ್ರತಿಭಟಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರತ್ತ ತಿರುಗಿಯೂ ನೋಡುತ್ತಿಲ್ಲ ಸರ್ಕಾರ. ಅವರ ನೋವುಗಳೇನು, ಬೇಡಿಕೆಗಳೇನು ಎಂಬುದರ ಬಗ್ಗೆ ಕಿವಿಗೊಟ್ಟು ಆಲಿಸುವ ಕನಿಷ್ಠ ಸೌಜನ್ಯವೂ ಇಲ್ಲದಾಯಿತೆ ಬಸವರಾಜ ಬೊಮ್ಮಾಯಿ ಅವರೇ..? ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ವಿಧಾನಸೌಧದ ಬಳಿಯೇ ಇರುವ ಫ್ರೀಡಂ ಪಾರ್ಕ್‌ಗೆ ಬರುವ ತಾಳ್ಮೆ ಇಲ್ಲವೇ..?” ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿತ್ತು.
ಆದರೀಗ ಅದೇ ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದಿದ್ದಾರೆ. ಕರ್ನಾಟಕ ರಾಜ್ಯ ಬಜೆಟ್‌ಗೂ ಮುನ್ನ ಪ್ರತಿಭಟನೆಯ ಬಿಸಿಯನ್ನು ಕಾಂಗ್ರೆಸ್ ಸರ್ಕಾರಕ್ಕೆ ಮುಟ್ಟಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಆಶಾ ಕಾರ್ಯಕರ್ತೆಯರ ಕೂಗಿಗೆ ಕಿವಿಗೊಡುತ್ತಾ? ಎಂದು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ