2 ದಿನಕ್ಕೊಮ್ಮೆ ನೀರು ಪೂರೈಸಿ : ಸದಸ್ಯರ ಒತ್ತಾಯ

ತುರುವೇಕೆರೆ:

ಸಭೆಯಲ್ಲಿ ಸದ್ದು ಮಾಡಿದ ಪ್ಲಾಸ್ಟಿಕ್ ಹಾವಳಿ, ಅಕ್ರಮ ಅಂಗಡಿ ಪ್ರಕರಣ

ಬೇಸಿಗೆ ಆರಂಭವಾಗುತ್ತಿದ್ದು ಪಟ್ಟಣದ ಜನತೆಗೆ ವಾರದಲ್ಲಿ 2 ದಿನಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವಂತೆ ಪಪಂ ಸದಸ್ಯರು ಒತ್ತಾಯಿಸಿದರು.

ಪಪಂ ಅಧ್ಯಕ್ಷ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಎನ್.ಆರ್.ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಸಮೃದ್ಧವಾಗಿ ಮಳೆಯಾಗಿ ಹೇಮಾವತಿ ನೀರು

ಹರಿದು ಮಲ್ಲಾಘಟ್ಟ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದರೂ ಪಟ್ಟಣದಲ್ಲಿ 4 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಬೇರೆ ತಾಲ್ಲೂಕಿನಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ ಆದರೇ ಪಟ್ಟಣದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಪಪಂ ಅಧ್ಯಕ್ಷ ಚಿದಾನಂದ್ ಪ್ರತಿಕ್ರಿಯಿಸಿ, ನಮ್ಮ ಪಟ್ಟಣಕ್ಕೆ ಕುಡಿಯುವ ನೀರಿನ ಕೊರತೆಯಿಲ್ಲ. ಮಲ್ಲಾಘಟ್ಟ ಕೆರೆಯಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ.

ಬೇಸಿಗೆ ಪ್ರಾರಂಭವಾಗುತ್ತಿದ್ದು, ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕಾಗಿದ್ದು, ಸದ್ಯದಲ್ಲಿಯೇ ನೀರು ಗಂಟಿಗಳು ಹಾಗೂ ಸದಸ್ಯರ ಸಭೆ ಕರೆದು ಚರ್ಚಿಸಿ 2 ದಿನಕ್ಕೊಮ್ಮೆ ನೀರು ಬಿಡಲು ಪ್ರಯತ್ನ ಮಾಡಲಾಗುವುದು ಎಂದರು.

ವಾಣಿಜ್ಯ ಸಂಕೀರ್ಣ, ಮುಗಿಯದ ಕಾಮಗಾರಿ :

ಸದಸ್ಯ ಯಜಮಾನ್ ಮಹೇಶ್ ಮಾತನಾಡಿ, ಪಟ್ಟಣದ ವಾಣಿಜ್ಯ ಸಂಕೀರ್ಣ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ? ಮಾರ್ಚ್ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪಪಂ ಸುಪರ್ದಿಗೆ ನೀಡಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದರು. ಆದರೂ ಇನ್ನೂ ಕಾಮಾಗಾರಿ ಪೂರ್ಣಗೊಂಡಿಲ್ಲ ಏಕೆ ಎಂದು ಇಂಜಿನಿಯರ್‍ರನ್ನು ಪ್ರಶ್ನಿಸಿದರು.

ಆಗ ಇಂಜಿನಿಯರ್ ಸತ್ಯನಾರಾಯಣ್ ಪ್ರತಿಕ್ರಿಯಿಸಿ ಗುತ್ತಿಗೆದಾರರು ತ್ವರಿತ ಗತಿಯಲ್ಲಿ ಕೆಲಸಮಾಡುತ್ತಿದ್ದು, ಮಾರ್ಚ್ ತಿಂಗಳೊಳಗೆ ಕಾಮಗಾರಿ ಮುಗಿಯಲಿದ್ದು, ಪಪಂ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದರು.

ಪ್ಲಾಸ್ಟಿಕ್ ಬಳಸಿದರೆ ದಂಡ :

ನೂತನ ನಾಮಿನಿ ಸದಸ್ಯ ನವೀನ್‍ಬಾಬು ಮಾತನಾಡಿ, ಪಟ್ಟಣದಲ್ಲಿ ಮತ್ತೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದ್ದರೂ ಆರೋಗ್ಯಾಧಿಕಾರಿಗಳು ಕಂಡರೂ ಕಾಣದಂತೆ ಸುಮ್ಮನಾಗಿದ್ದಾರೆ. ಪಟ್ಟಣದಲ್ಲಿ ರಾಜಾರೋಷವಾಗಿ ಪ್ಲಾಸ್ಟಿಕ್ ಕವರ್‍ಗಳು ಬಳಕೆಯಾಗುತ್ತಿದ್ದರೂ ಪ್ಲಾಸ್ಟಿಕ್‍ಮುಕ್ತ ಪಟ್ಟಣ ಮಾಡುವುದಾಗಿ ಹೇಳುವ ಅಧಿಕಾರಿಗಳು ಸುಮ್ಮನಿದ್ದಾರೆ, ಇವÀರ ಉದ್ದೇಶವೇನು.

ಅಧಿಕಾರಿಗಳು ಅಂಗಡಿಗಳಿಗೆ ನುಗ್ಗಿ ವಶಪಡಿಸಿಕೊಂಡ ಪ್ಲಾಸ್ಟಿಕ್ ವಸ್ತು, ಕವರ್‍ಗಳು ಎಲ್ಲಿವೆ ಎಂದು ಪ್ರಶ್ನಿಸಿದರು. ಆಗ ಮುಖ್ಯಾಧಿಕಾರಿ ಮಂಜುಳಾದೇವಿ ಪ್ರತಿಕ್ರಿಯಿಸಿ, ಪಟ್ಟಣದಲ್ಲಿ ವಶಪಡಿಸಿಗೊಂಡ ಪ್ಲಾಸ್ಟಿಕ್ ಕವರ್‍ಅನ್ನು ಗೋಡನ್‍ನಲ್ಲಿ ತುಂಬಿದ್ದು, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಗೆ ಹಂತ ಹಂತವಾಗಿ ಪ್ಲಾಸ್ಟಿಕ್ ನೀಡಿದ್ದೇವೆ.

ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ಬಳಕೆ ಮಾಡುತ್ತಿರುವರಿಗೆ ದಂಡ ಹಾಕಿ ಎಚ್ಚರಗೊಳಿಸಲಾಗಿದೆ. ಮತ್ತೆ ಪ್ಲಾಸ್ಟಿಕ್ ಪ್ರಕರಣಗಳು ಮರುಕಳಿಸಿದರೆ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಕವರ್ ವಶಪಡಿಸಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಪ್ರಭಾಕರ್, ಅಂಜನ್‍ಕುಮಾರ್, ಜಯಮ್ಮ, ನದೀಂ, ಮಧು, ರವಿ, ಸಪ್ನನಟೇಶ್, ಶೋಭಾಉಮೇಶ್, ಆನಂದ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು..

ಪಪಂಗೆ ತನ್ನ ಆಸ್ತಿ ಬೇಡವೇ ? :

ಸದಸ್ಯೆ ಆಶಾ ರಾಜಶೇಖರ್ ಮಾತನಾಡಿ, ತಿಪಟೂರು ರಸ್ತೆಯ ಕೃಷ್ಣ ಟಾಕೀಸ್ ಬಳಿಯಲ್ಲಿ ಪಪಂ ಜಾಗದಲ್ಲಿ ಕೆಲವರು ಅಕ್ರಮವಾಗಿ ಅಂಗಡಿ ನಿರ್ಮಿಸಿಕೊಂಡು ವ್ಯಾಪಾರಿಗಳಿಗೆ ಬಾಡಿಗೆ ಪಡೆಯುತ್ತಿದ್ದಾರೆ.

ಈ ಜಾಗವನ್ನು ಅಳತೆ ಮಾಡಿ ಪಪಂ ಸುಪರ್ಧಿಗೆ ನೀಡಿ ಎಂದು ಅರ್ಜಿ ನೀಡಿ ಸುಮಾರು 1 ವರ್ಷ ಕಳೆದಿದೆ, ಆದರೂ ಮುಖ್ಯಾಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಪಪಂಗೆ ತನ್ನ ಆಸ್ತಿ ಬೇಡವಾಗಿದೆಯೇ? ಎಂದು ಪ್ರಶ್ನಿಸಿದರು. ಆಗ ಮುಖ್ಯಾಧಿಕಾರಿಯವರು ಪ್ರತಿಕ್ರಿಯಿಸಿ,

ಜಾಗದ ವಿಚಾರವಾಗಿ ಈಗಾಗಲೇ ಸರ್ವೆ ಇಲಾಖೆಗೆ ಕಡತ ಕಳಿಸಿದ್ದು ಗುರುವಾರ ಸರ್ವೆ ಕಾರ್ಯ ಮಾಡಿಸಲಿದ್ದೇವೆ. ಸರ್ವೆ ನಂ. 192 ರಲ್ಲಿ ಶ್ರೀನಿವಾಸ್ ಎಂಬ ವ್ಯಕ್ತಿಯ ಜಮೀನು ಇದ್ದು, ಪಕ್ಕದಲ್ಲಿ ನಮ್ಮ 24*46 ಅಳತೆಯ ಜಮೀನು ಇದೆ. ಸರ್ವೆಯಲ್ಲಿ ಅಳತೆ ಮಾಡಿ ಜಮೀನು ವಶಕ್ಕೆ ಪಡೆಯಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap