ತಿರುವನಂತಪುರಂ:
ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಸ್ಯಾಂಡಲ್‌ವುಡ್ ಜತೆಗೆ ಉತ್ತಮ ನಂಟು ಹೊಂದಿದ್ದಾರೆ. ಅದರಲ್ಲಿಯೂ ಕನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಜತೆ ಒಡನಾಟದಲ್ಲಿದ್ದಾರೆ. ಪೃಥ್ವಿರಾಜ್ ತಮ್ಮ ನಿರ್ಮಾಣ ಸಂಸ್ಥೆ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮೂಲಕ ಹಲವು ಕನ್ನಡ ಚಿತ್ರಗಳ ಮಲಯಾಳಂ ಅವತರಣಿಕೆಯನ್ನು ಕೇರಳದಲ್ಲಿ ಬಿಡುಗಡೆಗೊಳಿಸಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ ಈಗಾಗಲೇ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕೆಜಿಎಫ್: ಚಾಪ್ಟರ್ ʼ2, ʼಕಾಂತಾರʼ, ತೆಲುಗು ಚಿತ್ರ ʼಸಲಾರ್: ಪಾರ್ಟ್ 1 ಸೀಸ್‌ಫೈರ್ʼನ ಮಲಯಾಳಂ ಡಬ್‌ನ ಹಕ್ಕು ಪಡೆದುಕೊಂಡಿದ್ದಾರೆ. ಇದೀಗ ಮತ್ತೊಂದು ಬಹುನಿರೀಕ್ಷಿತ ಚಿತ್ರ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕನ್ನಡದ ʼಕಾಂತಾರ: ಚಾಪ್ಟರ್ 1ʼರ ಮಲಯಾಳಂ ಆವೃತ್ತಿಯನ್ನು ಕೇರಳದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಪೃಥ್ವಿರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼʼದೈವಿಕ ಪ್ರದರ್ಶನಕ್ಕೆ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್ ಜತೆ ಕೈ ಜೋಡಿಸಲು ಮುಂದಾಗಿದ್ದೇವೆ. ʼಕಾಂತಾರ: ಚಾಪ್ಟರ್ 1ʼ ಸಿನಿಮಾದ ಮಲಯಾಳಂ ಅವತರಣಿಕೆಯನ್ನು ಅಕ್ಟೋಬರ್ 2ರಂದು ಕೇರಳ ಥಿಯೇಟರ್‌ಗಳಲ್ಲಿ ನೋಡಿʼʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ತಿಳಿಸು ಫ್ಯಾನ್ ಖುಷಿಯಾಗಿದ್ದಾರೆ.
ʼಕೆಜಿಎಫ್ 2ʼ, ʼಕಾಂತಾರʼದಂತಹ ಚಿತ್ರಗಳ ಹಿಂದಿ ಡಬ್ ಅನ್ನು ಉತ್ತರ ಭಾರತಾದ್ಯಂತ ವಿತರಿಸಿದ ಎಎ ಫಿಲ್ಮ್ಸ್ ʼಕಾಂತಾರ: ಚಾಪ್ಟರ್ 1ʼ ಹಿಂದಿ ಅವತರಣಿಕೆ ಹಕ್ಕನ್ನೂ ಪಡೆದುಕೊಂಡಿದೆ. ʼʼದೈವಿಕ ಭೂಮಿಗೆ ಒಂದು ಹೆಜ್ಜೆ…ಕಾಂತಾರ: ಚಾಪ್ಟರ್ 1ರ ಹಿಂದಿ ವರ್ಷನ್ ಅನ್ನು ಅಕ್ಟೋಬರ್ 2ರಂದು ಉತ್ತರ ಭಾರತ ಮತ್ತು ನೇಪಾಳದಲ್ಲಿ ಎಎ ಫಿಲ್ಮ್ಸ್ ರಿಲೀಸ್ ಮಾಡಲಿದೆʼʼ ಎಂದು ಮಾಹಿತಿ ನೀಡಿದೆ.
ಸ್ಯಾಂಡಲ್‌ವುಡ್‌ನ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ ಇದೀಗ ಜಾಗತಿಕವಾಗಿ ಮತ್ತೊಮ್ಮೆ ಮಿಂಚಲು, ದಾಖಲೆ ಬರೆಯಲು ಸಜ್ಜಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಬಾಲಿವುಡ್‌ಗೂ ಕಾಲಿಟ್ಟಿದೆ. ಸೂಪರ್ ಸ್ಟಾರ್ ಹೃತಿಕ್ ರೋಷನ್ ಜತೆ ಚಿತ್ರವನ್ನು ಘೋಷಿಸಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಬಹುಭಾಷಾ ನಟ, ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅದಿಕೃತ ಘೋಷಣೆ ಇನ್ನೂ ಹೊರ ಬಿದ್ದಿಲ್ಲ.
ಮಲಯಾಳಂ ಸೂಪರ್ ಸ್ಟಾರ್, ಬಹುಭಾಷಾ ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಬಿಫಿಲ್ಮಿ ವೆಬ್‌ಸೈಟ್ ವರದಿ ಮಾಡಿತ್ತು. ನಾಯಕನಾಗಿ ಮಿಂಚಿರುವ ಪೃಥ್ವಿರಾಜ್ ನಿರ್ದೇಶಕನಾಗಿಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಈಗಾಗಲೇ ಅವರು 3 ಮಲಯಾಳಂ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಮೂರೂ ಸಿನಿಮಾಗಳೂ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿವೆ. ಜತೆಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದಿವೆ. ಈ ಹಿನ್ನೆಲೆಯಲ್ಲಿ ಈ ಚಿತ್ರವನ್ನೂ ಅವರೇ ನಿರ್ದೇಶಿಸುತ್ತಿರುವ ಬಹುತೇಕ ಪಕ್ಕಾ ಎಂದು ಮೂಲಗಳು ತಿಳಿಸಿವೆ.
