ಮುಂಬಯಿ:
ಒಂದು ಕಾಲದಲ್ಲಿ ಮುಂದಿನ ಸಚಿನ್ ತೆಂಡೂಲ್ಕರ್ ಎಂದೇ ಕರೆಯಲ್ಪಡುತ್ತಿದ್ದ ಮುಂಬೈನ ಬ್ಯಾಟರ್ ಪೃಥ್ವಿ ಶಾ ಕ್ರಿಕೆಟ್ ಭವಿಷ್ಯ ಇದೀಗ ಮತ್ತಷ್ಟು ಡೋಲಾಯಮಾನವಾಗಿದೆ. ಪ್ರತಿಭೆ ಇದ್ದರೂ ಇತರ ಕಾರಣಗಳಿಂದ ಟೀಂ ಇಂಡಿಯಾದಿಂದ, ದೇಶೀಯ ಟೂರ್ನಿಯಿಂದಲೈ ಹೊರಬಿದ್ದಿರುವ ಶಾ, ಸಹವಾಸ ದೋಷದಿಂದಾಗಿ ತನ್ನ ಕ್ರಿಕೆಟ್ ವೃತ್ತಿ ಬದುಕಿಗೆ ತೊಂದರೆಯಾಯಿತು ಎಂದಿದ್ದಾರೆ.
“ನನ್ನ ಜೀವನದಲ್ಲಿ ತುಂಬಾ ಘಟನೆಗಳು ನಡೆದವು. ಜನರು ಇಂದು ನನ್ನ ಬಗ್ಗೆ ಬೇರೆ ದೃಷ್ಟಿಕೋನಗಳಲ್ಲಿ ಮಾತನಾಡುತ್ತಾರೆ. ಆದರೆ ನಿಜವಾಗಿ ಏನು ನಡೆಯಿತು ಎಂಬುದು ನನಗೆ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ನಾನು ಜೀವನದಲ್ಲಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಕ್ರಿಕೆಟ್‌ಗೆ ಕಡಿಮೆ ಸಮಯ ನೀಡಿದ್ದೇನೆ. ಮೊದಲು 4-5 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಬ್ಯಾಟಿಂಗ್ ಮಾಡಲು ಎಂದಿಗೂ ಬೇಸರವಾಗುತ್ತಿರಲಿಲ್ಲ. ಅರ್ಧ ದಿನವನ್ನು ಮೈದಾನದಲ್ಲಿ ಕಳೆಯುತ್ತಿದ್ದೆ. ಇದು 2023ರ ವರೆಗೆ ನಡೆಯಿತು. ನಂತರ ನಾನು ಅನಗತ್ಯ ವಿಷಯಗಳನ್ನು ಮುಖ್ಯವೆಂದು ಪರಿಗಣಿಸಲು ಪ್ರಾರಂಭಿಸಿದೆ” ಎಂದರು.
“ನಾನು ತಪ್ಪು ಸ್ನೇಹಿತರನ್ನು ಆಯ್ಕೆ ಮಾಡಿಕೊಂಡೆ. ಅವರ ಸಹವಾಸ ದೋಷದಿಂದಾಗಿ ದಾರಿ ತಪ್ಪಿದೆ. ಈ ಮೂಲಕ ನನ್ನ ಕ್ರಿಕೆಟ್ ಬದುಕಿಗೆ ನಾನೇ ಕೊಳ್ಳಿ ಇಟ್ಟುಕೊಂಡೆ. ಸದ್ಯ ನಾನು ಮನೆಯಿಂದಲೂ ಹೊರಗೆ ಹೋಗುವುದಿಲ್ಲ. ಮತ್ತೆ ಕ್ರಿಕೆಟ್‌ಗೆ ಮರಳಬೇಕೆಂದರೂ ಸಾಧ್ಯವಾಗುತ್ತಿಲ್ಲ. ಈ ಕಷ್ಟದ ಸಮಯದಲ್ಲಿ ತಂದೆ ಬೆಂಬಲವಾಗಿ ನಿಂತಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ತಮ್ಮ ತಪ್ಪಿಗೆ ಪಶ್ಚಾತ್ತಾಪಪಟ್ಟರು.
ತನ್ನ ಪ್ರತಿಭೆಯಿಂದಲೇ ಸದ್ದು ಮಾಡಿದ್ದ ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಶಾ, 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಆದರೆ ತನ್ನ ಅಶಿಸ್ತಿನ ಕಾರಣದಿಂದ ಅಷ್ಟೇ ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾದರು. ಶಾ ಭಾರತ ಪರ ಕೇವಲ ಐದು ಟೆಸ್ಟ್, ಆರು ಏಕದಿನ ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಕಳೆದ ವರ್ಷ ಫಿಟ್ನೆಸ್ ಕಾರಣದಿಂದ ಅವರನ್ನು ಮುಂಬೈ ರಣಜಿ ತಂಡದಿಂದಲೂ ಕೈ ಬಿಡಲಾಯಿತು.








