ಪಿಎಸ್‌ಐ ನೇಮಕ ಹಗರಣ : ಎಸ್‌ ಐ ಟಿ ಗೆ ವಹಿಸಲು ಸರ್ಕಾರದ ನಿರ್ಧಾರ

ಬೆಂಗಳೂರು: 

      ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಪಿಎಸ್‌ಐ ನೇಮಕ ಹಗರಣದ ಬಗ್ಗೆ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚಿಸಿ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

    ಸಿಎಂ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯವೂ ಸೇರಿ ಒಟ್ಟು 48 ವಿಷಯಗಳಿಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

    ಪಿಎಸ್‌ಐ ನೇಮಕ ಹಗರಣದಲ್ಲಿ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ಸಹಿತ 113 ಜನರ ಪಾತ್ರ ಇರುವುದನ್ನು ತನಿಖೆಗೆ ಸರಕಾರ ನೇಮಕ ಮಾಡಿದ್ದ ನ್ಯಾ| ಬಿ. ವೀರಪ್ಪ ನೇತೃತ್ವದ ಸಮಿತಿ ನೀಡಿದ ವರದಿಯಲ್ಲಿ ಪತ್ತೆ ಹಚ್ಚಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ ಕೆಲವು ಪ್ರಭಾವಿಗಳು ಆಯೋಗ ನೀಡಿದ ಸಮನ್ಸ್‌ಗೆ ಉತ್ತರ ನೀಡಿಲ್ಲ. ಖುದ್ದು ಹಾಜರಾಗಿ ಹೇಳಿಕೆಯನ್ನೂ ದಾಖಲಿಸಿಲ್ಲ. ಪ್ರಕರಣದ ಸ್ವರೂಪ ಗಂಭೀರವಾಗಿರುವುದರಿಂದ ಇವರೆಲ್ಲರಿಂದ ಮಾಹಿತಿ ಪಡೆಯುವುದು ಅನಿವಾರ್ಯ ಎಂದು ತನಿಖಾ ಸಂಸ್ಥೆ ಶಿಫಾರಸು ಮಾಡಿದೆ.

     ಸಮಿತಿಯ ಶಿಫಾರಸಿನಲ್ಲಿ ಅಕ್ರಮದ ಬಗ್ಗೆ ಮುಂದುವರಿದ ತನಿಖೆ ಅಗತ್ಯವಿದೆ ಎಂದು ಅಭಿಪ್ರಾಯಪಡಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.

    ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದ 545 ಪಿಎಸ್‌ಐ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಅಂದಿನ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಪ್ರಕರಣದಲ್ಲಿ ಎಡಿಜಿಪಿ ದರ್ಜೆಯ ಅಧಿಕಾರಿಯನ್ನೇ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಹಗರಣದ ಬಗ್ಗೆ ತನಿಖೆ ನಡೆಸಲು ನ್ಯಾ| ವೀರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

    ವಿಧಾನಸೌಧದ ಆವರಣದಲ್ಲಿ 23 ಕೋ.ರೂ. ವೆಚ್ಚದಲ್ಲಿ ಕನ್ನಡತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡುವ ಇನ್ನೊಂದು ಮಹತ್ವದ ನಿರ್ಧಾರವನ್ನೂ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಕೆಂಗಲ್‌ ಪ್ರತಿಮೆಯ ಎಡ ಭಾಗದಲ್ಲಿರುವ ಖಾಲಿ ಜಾಗವನ್ನು ಇದಕ್ಕಾಗಿ ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap