ಇಸ್ಲಮಾಬಾದ್:
ಪಾಕಿಸ್ತಾನ ಸೈನಿಕರನ್ನು ಗುರಿಯಾಗಿಸಿ ಬಲೂಚಿಸ್ತಾನ ಬಂಡುಕೋರರು ಪುಲ್ವಾಮಾ ಮಾದರಿಯಲ್ಲಿ ಆತ್ಮಾಹುತಿ ದಾಳಿ ನಡೆಸಿರುವ ವಿಡಿಯೊವನ್ನು ಬಲೂಚಿಸ್ತಾನ ಬಂಡೂಕೋರರು(BLA)ರಿಲೀಸ್ ಮಾಡಿದ್ದಾರೆ. BLA ಬಿಡುಗಡೆ ಮಾಡಿದ ವೀಡಿಯೊದಲ್ಲಿ ಏಕಾಏಕಿ ಬಾಂಬ್ ಸ್ಫೋಟಗೊಂಡಿದ್ದು, ಇದರ ಬೆನ್ನಲ್ಲೇ ಬಸ್‌ನಿಂದ ಹೊಗೆ ಹೊರಬರುತ್ತಿರುವುದು ಕಂಡುಬಂದಿದೆ. ಎಂಟು ಬಸ್‌ಗಳ ಪೈಕಿ ಒಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಭೀಕರ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಭೀಕರ ದಾಳಿಯಲ್ಲಿ 90 ಸೈನಿಕರು ಬಲಿಯಾಗಿದ್ದಾರೆ ಎಂದು BLA ಬಂಡೂಕೋರರು ಹೇಳಿಕೊಂಡಿದೆ. ಆದರೆ ಪಾಕ್ ಸರ್ಕಾರ ಮಾತ್ರ ಕೇವಲ 7ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ನಿನ್ನೆ ಮಧ್ಯಾಹ್ನ ಕ್ವೆಟ್ಟಾದಿಂದ ಟಫ್ತಾನ್‌ಗೆ ಪ್ರಯಾಣಿಸುತ್ತಿದ್ದ ಪಾಕಿಸ್ತಾನದ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಬಿಎಲ್‌ಎ ಬಂಡುಕೋರರು ಏಕಾಏಕಿ ದಾಳಿ ನಡೆಸಿದ್ದರು. ಏಳು ಬಸ್‌ಗಳು ಮತ್ತು ಎರಡು ವಾಹನಗಳನ್ನು ಒಳಗೊಂಡ ಬೆಂಗಾವಲು ಪಡೆಯನ್ನು ಗುರಿಯಾಗಿಸಲಾಗಿತ್ತು. 2019ರಲ್ಲಿ ನಡೆದ ಪುಲ್ವಾಮಾ ಅಟ್ಯಾಕ್ ಮಾದರಿಯಲ್ಲೇ ಒಂದು ಬಸ್‌ಗೆ ಐಇಡಿಗಳಿಂದ ತುಂಬಿದ ವಾಹನ ಡಿಕ್ಕಿ ಹೊಡೆದಿದೆ. ಇನ್ನೊಂದು ಬಸ್‌ನ ಮೇಲೆ ರಾಕೆಟ್ ಚಾಲಿತ ಗ್ರೆನೇಡ್‌ಗಳು (ಆರ್‌ಪಿಜಿ) ದಾಳಿ ನಡೆಸಿದ್ದರು. ಘಟನೆ ಬೆನ್ನಲ್ಲೇ ದಾಳಿ ಹೊಣೆಯನ್ನು ಬಿಎಲ್‌ಎ ಹೊತ್ತುಕೊಂಡಿದ್ದು, ದಾಳಿಯಲ್ಲಿ ಬರೋಬ್ಬರಿ 90ಸೈನಿಕರನ್ನು ಬಲಿ ಪಡೆದಿರುವುದಾಗಿ ಬಿಎಲ್ಎ ಹೇಳಿಕೊಂಡಿತ್ತು.
ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನದ ಬಂಡುಕೋರರ ಗುಂಪೊಂದು ಕೆಲವು ದಿನಗಳ ಹಿಂದೆ ಮಧ್ಯಾಹ್ನ ರೈಲ್ವೆ ಹಳಿಯ ಒಂದು ಭಾಗದ ಮೇಲೆ ಬಾಂಬ್ ದಾಳಿ ನಡೆಸಿ ರೈಲಿಗೆ ನುಗ್ಗಿ, ಪ್ರಯಾಣಿಕರು ಮತ್ತು ಪಾಕ್ ಸೈನಿಕರನ್ನು ವಶಕ್ಕೆ ಪಡೆದಿತ್ತು. ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿರುವ ಬಲೂಚಿಸ್ತಾನದ ಬಲೂಚ್ ಲಿಬರೇಶನ್ ಆರ್ಮಿ ಉಗ್ರರು ಖೈಬರ್ ಕಣಿವೆಯ ಗುಡಾಲಾರ್ ಹಾಗೂ ಪಿರು ಕೊಣೇರಿ ನಡುವಿನ 8ನೇ ಸುರಂಗದ ಸನಿಹ ಸಾಗುತ್ತಿದ್ದ 9 ಕೋಚ್‌ಗಳಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಬಳಿಕ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎಲ್ಲ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ʻಪಾಕಿಸ್ತಾನ ಸೇನಾ ಪಡೆ ಪ್ರತಿ ಕಾರ್ಯಾಚರಣೆ ಕೈಗೊಂಡಲ್ಲಿ ಪರಿಣಾಮಗಳು ತೀವ್ರವಾಗಿರಲಿವೆ. ನಮ್ಮ ವಿರುದ್ಧ ಸೇನೆ ದಂಡೆತ್ತಿ ಬಂದರೆ ಎಲ್ಲ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ. ಮುಂದಾಗುವ ರಕ್ತಪಾತದ ಹೊಣೆಯನ್ನು ಸೇನೆಯೇ ಹೊರಬೇಕಾಗುತ್ತದೆʼಎಂದು ಬಿಎಲ್‌ಎ ಎಚ್ಚರಿಕೆ ನೀಡಿದ್ದರು. ಸದ್ಯ ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ಅವರ ಸ್ವಂತ ಊರುಗಳಿಗೆ, ಮಾಚ್ ಜಿಲ್ಲೆ ಮತ್ತು ಕ್ವೆಟ್ಟಾದಲ್ಲಿರುವ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








