ದಾವಣಗೆರೆ:
ಭದ್ರಾ ನಾಲೆಯ ಮೇಲ್ಭಾಗದಲ್ಲಿರುವ ಅಕ್ರಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪಿಸಬೇಕೆಂದು ಒತ್ತಾಯಿಸಿ ಕೊನೆ ಭಾಗದ ರೈತರು, ಗುರುವಾರ ನಗರದ ನೀರಾವರಿ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ನಗರದ ಹದಡಿ ರಸ್ತೆಯಲ್ಲಿರುರವ ನೀರಾವರಿ ಇಲಾಖೆಯ ಕಚೇರಿ ಎದುರು ಜಮಾಯಿಸಿದ ಕೊನೆ ಭಾಗದ ರೈತರು, ಕಚೇರಿಯಲ್ಲಿದ್ದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಹಾಗೂ ಅಧಿಕಾರಿಗಳನ್ನು ಕಚೇರಿಯಿಂದ ಹೊರ ಕಳುಹಿಸಿ, ಕಚೇರಿಯ ಬಾಗಿಲಿಗೆ ಬೀಗ ಜಡಿದು, ಕೊನೆ ಭಾಗಕ್ಕೆ ನೀರು ತಲುಪಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಧನಂಜಯ ಕಡ್ಲೇಬಾಳು, ಭದ್ರಾ ಬಲ ನಾಲೆಯಲ್ಲಿ ನೀರು ಹರಿಸಿ, ಇಂದಿಗೆ 45 ದಿನಗಳು ಕಳೆದಿವೆ. ಆದರೂ, ಈ ವರೆಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಹಳ್ಳಿಗಳಿಗೆ ನೀರು ತಲುಪಿಲ್ಲ. ಆದ್ದರಿಂದ ಕಳೆದ ನಾಲ್ಕು ಬೆಳೆಗಳನ್ನು ಕಳೆದುಕೊಂಡಿರುವ ರೈತರು ಈ ಬಾರಿಯೂ ಬೆಳೆ ಕಳೆದುಕೊಳ್ಳುವು ಆತಂಕದಲಿದ್ದು, ಈ ಬಾರಿಯೂ ಕೊನೆ ಭಾಗಕ್ಕೆ ನೀರು ತಲುಪದಿದ್ದರೆ, ರೈತರು ಆತ್ಮಹತ್ಯೆಯ ದಾರಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ಅಳಲು ತೋಡಿಕೊಂಡರು.
ಕೊನೆ ಭಾಗದ ಗ್ರಾಮಗಳಾದ ಕಕ್ಕರಗೊಳ್ಳ, ಆವರಗೊಳ್ಳ, ಕೊಂಡಜ್ಜಿ, ದೇವರಹಟ್ಟಿ, ಬದಿಯಾ ನಾಯ್ಕನ ತಾಂಡ, ಕೆಂಚನಹಳ್ಳಿ, ಬುಳ್ಳಾಪುರ, ಕೋಡಿ ಕ್ಯಾಂಪ್, ಅರಸಾಪುರ, ಕಡ್ಲೇಬಾಳು ಸೇರಿದಂತೆ 32 ಗ್ರಾಮಗಳ ರೈತರು, ನಾಲೆಯ ನೀರು ಈ ಬಾರಿ ಸಿಗಬಹುದೆಂಬ ಕಾರಣಕ್ಕೆ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿಕೊಂಡಿದ್ದಾರೆ. ಆದರೆ, ಕೊನೆ ಭಾಗಕ್ಕೆ ನೀರು ತಲುಪದ ಕಾರಣ ಭತ್ತದ ಬೆಳೆಯೂ ಸಂಪೂರ್ಣ ಒಣಗಿ ಹೋಗಿದೆ. ಈಗ ಭತ್ತ ಕಾಳು ಕಟ್ಟುವ ಸಮಯವಾಗಿದ್ದು, ಈ ಸಂದರ್ಭದಲ್ಲಿ ನೀರಿನ ಅವಶ್ಯಕತೆ ಇದೆ. ಆದರೆ, ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ ಸಹ ಕೊನೆ ಭಾಗಕ್ಕೆ ನೀರು ತಲುಪಿಸುವುದರಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
ನಾಲೆ ಮೇಲ್ಭಾಗವಾಗಿರುವ ಚನ್ನಗಿರಿಯಿಂದ ಹಿಡಿದು ಕುರ್ಕಿಯ ವರೆಗಿನ ರೈತರು ನಾಲೆಯಲ್ಲಿ ಸಾವಿರಾರು ಅಕ್ರಮ ಪಂಪ್‍ಸೆಟ್ ಅಳವಡಿಸಿ, ಭಾರೀ ಪ್ರಮಾಣದಲ್ಲಿ ನೀರು ಎತ್ತುತ್ತಿರುವುದೇ ಕೊನೆ ಭಾಗಕ್ಕೆ ನೀರು ತಲುಪದಿರಲು ಪ್ರಮುಖ ಕಾರಣವಾಗಿದೆ. ಆದ್ದರಿಂದ ಮೇಲ್ಭಾಗದಲ್ಲಿ ಅಳವಡಿಸಿರುವ ಅಕ್ರಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸುವುದರ ಜೊತೆಗೆ, ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಇನ್ನೂ 24 ಗಂಟೆಗಳ ಒಳಗಡೆ ಕೊನೆ ಭಾಗಕ್ಕೆ ನೀರು ತಲುಪಿಸಬೇಕು. ಇಲ್ಲದಿದ್ದರೆ, ಕೊನೆ ಭಾಗದ ರೈತರು ದಾವಣಗೆರೆ ಬಂದ್‍ಗೆ ಕರೆ ನೀಡಿ, ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್, ಈಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಅಕ್ರಮ ಪಂಪ್‍ಸೆಟ್ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಮೇಲ್ಭಾಗದ ವಿದ್ಯುತ್ ಸಂಪರ್ಕ ಕಡಿತ ಕೈಗೊಳಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ ಕೊನೆ ಭಾಗಕ್ಕೆ ಇನ್ನೂ 24 ಗಂಟೆಯೊಳಗಡೆ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆದರು.
ಪ್ರತಿಭಟನೆಯಲ್ಲಿ ಶೇಷಗಿರಿ, ಸೇವ್ಯಾ ನಾಯ್ಕ, ಶೇಖರ ನಾಯ್ಕ, ಎಲ್.ಹೆಚ್.ಹನುಮಂತಪ್ಪ, ಗುರುಶಾಂತ್, ಚೆನ್ನಪ್ಪಗೌಡ, ತ್ರಿಮೂರ್ತಿ, ಅಶೋಕ್ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ