ಬೆಂಗಳೂರು:
ಜಾತಿ ನಿಂದನೆ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಅವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೂಂಡಾ ಕಾಯ್ದೆಯಡಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೊಂದು ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಜಾತಿ ನಿಂದನೆ ಮಾಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭೈರಪ್ಪ ಹರೀಶ್ ಎಂಬುವರು ನೀಡಿದ ದೂರಿನ ಮೇರೆಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಮಾಡಿದ ಆರೋಪದಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಹೀಗಾಗಿ ನ್ಯಾಯಾಲಯದ ಮುಂದೆ ಶನಿವಾರ ಪುನೀತ್ ಕೆರೆಹಳ್ಳಿಯನ್ನು ಸಂಪಿಗೆಹಳ್ಳಿ ಪೊಲೀಸರು ಹಾಜರುಪಡಿಸಲಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೆರೆಹಳ್ಳಿಯ ಪುನೀತ್, ಸದ್ಯ ಜೆ.ಪಿ.ನಗರದ 7ನೇ ಹಂತದಲ್ಲಿ ವಾಸವಿದ್ದರು. ಗೂಂಡಾ ಕಾಯ್ದೆಯಡಿ ಇತ್ತೀಚೆಗಷ್ಟೇ ಪುನೀತ್ ಅವರನ್ನು ಬಂಧಿಸಲಾಗಿತ್ತು. ನಂತರ, ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಸರ್ಕಾರ, ಬಂಧನಮುಕ್ತಗೊಳಿಸಿತ್ತು.
ಗೂಂಡಾ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಹಳ್ಳಿ ಪರಪ್ಪನ ಅಗ್ರಹಾರ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿದ್ದರು. ಮೊಹಮ್ಮದ್ ಇದ್ರೀಸ್ ಪಾಷಾ ಕೊಲೆ ಪ್ರಕರಣ ಸೇರಿ ವಿವಿಧ ಠಾಣೆಗಳಲ್ಲಿ 11 ಪ್ರಕರಣಗಳಿದ್ದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು.