ಬೆಂಗಳೂರು
ರಾಮನಗರ ಜಿಲ್ಲೆಯ ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಜಾನುವಾರು ಸಾಗಟ ವಾಹನದ ಸಹಾಯಕ ಚಾಲಕ ಇದ್ರೀಸ್ ಪಾಷಾ ಎಂಬುವವರನ್ನು ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ಸಂಬಂಧ ಪುನೀತ್ ಕೆರೆಹಳ್ಳಿ ಮತ್ತು ಇತರ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಇದ್ರೀಸ್ ಪಾಷಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ನಾಲ್ವರನ್ನು ಸಾತನೂರು ಠಾಣೆ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಕರ್ನಾಟಕದಿಂದ ಪರಾರಿಯಾಗಿದ್ದ ಆರೋಪಿಗಳು ಬೇರೆಡೆ ತಲೆ ಮರೆಸಿಕೊಂಡಿದ್ದರು. ಬಳಿಕ ಆರೋಪಿ ಪುನೀತ್ ಕೆರೆಹಳ್ಳಿ ಫೇಸ್‌ಬುಕ್ ಲೈವ್ ಕೂಡ ಬಂದಿದ್ದರು.
ಕಳೆದ ಶುಕ್ರವಾರ ರಾತ್ರಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡ ಅಕ್ರಮವಾಗಿ ಅಡ್ಡಗಟ್ಟಿದ್ದರು. ಪೊಲೀಸ್ ಮೂಲಗಳ ಪ್ರಕಾರ ಸಾತನೂರು ಪೊಲೀಸ್ ಠಾಣೆ ಎದುರು ವಾಹನ ನಿಲ್ಲಿಸಿ ಇದ್ರೀಸ್ ಪಾಷಾ ಹಾಗೂ ಲೋಡರ್ ಇರ್ಫಾನ್ ಅವರನ್ನು ಹಿಂಬಾಲಿಸಿದ್ದಾರೆ. ಕೆಲವರು ಮೃತ ಇದ್ರೀಸ್ ಪಾಷಾ ಅವರನ್ನು ಹಿಂಬಾಲಿಸಿದರೆ, ಇಬ್ಬರು ಕಂಟೈನರ್ ಬಳಿ ನಿಂತಿದ್ದ ಜಹೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಮರುದಿನ ಬೆಳಗ್ಗೆ ಠಾಣೆಯಿಂದ ನೂರು ಮೀಟರ್ ದೂರದಲ್ಲಿ ಇದ್ರೀಸ್ ಪಾಷಾ ಅವರ ಮೃತದೇಹ ಪತ್ತೆಯಾಗಿತ್ತು.
ಮಂಗಳವಾರ ಘಟನೆ ಬಗ್ಗೆ ಮಾತನಾಡಿದ್ದ ರಾಮನಗರ ಎಸ್‌ಪಿ ಕಾರ್ತೀಕ್ ರೆಡ್ಡಿ, ಘಟನೆಗೆ ಸಂಬಂಧಪಟ್ಟಂತೆ ನಮ್ಮ ಸಾತನೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಒಂದು ಹಸು ಸಾಗಾಣೆ ಮಾಡುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ನೀಡಿರುವುದು, ಮತ್ತೊಂದು ಗಾಡಿ ಚಾಲಕ ನಮ್ಮ ಗಾಡಿಗೆ ಪುನೀತ್ ಕೆರೆಹಲ್ಲಿಮತ್ತು ಆತನ ಸ್ನೇಹಿತರು ಅಕ್ರಮವಾಗಿ ತಡೆ ಹಾಕಿದ್ದಾರೆ ಎಂದು ನೀಡಿರುವುದು. ಮತ್ತೊಂದು ಪ್ರಕರಣ ಆ ದಿನ ಬೆಳಗ್ಗೆ ಇಲ್ಲಿಂದ ನೂರು ಮೀಟರ್ ದೂರದಲ್ಲಿ ಇದ್ರೀಸ್ ಅವರ ಮೃತದೇಹ ದೊರಕುತ್ತದೆ ಅದರ ಮೇಲೆ ಅವರ ಅಣ್ಣ ಕೊಲೆ ಕೇಸ್ ದಾಖಲು ಮಾಡಿದ್ದಾರೆ” ಎಂದಿದ್ದರು.
“ಮೂರು ಕೇಸ್‌ಗಳ ತನಿಖೆ ನಡೆಯುತ್ತಿದೆ. ನಾಲ್ಕು ತಂಡಗಳನ್ನು ರಚನೆ ಮಾಡಿದ್ದೇವೆ. ಪುನೀತ್ ಕೆರೆಹಳ್ಳಿ ಪರಾರಿಯಾಗಿದ್ದಾನೆ. ಅವನನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಎಲ್ಲಾ ಸುಮ್ಮನೆ ಹೇಳುತ್ತಾರೆ. ಆದರೆ ಪರಾರಿಯಾಗಿದ್ದಾನೆ. ನಾವು ಅವನನ್ನು ಪತ್ತೆ ಮಾಡುತ್ತೇವೆ” ಎಂದಿದ್ದರು. ಅದರಂತೆ ಇಂದು ರಾಜಸ್ಥಾನದಲ್ಲಿ ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ