ಪಂಜಾಬ್‌ ಗ್ರೆನೇಡ್ ದಾಳಿಯ ಹಂತಕ ಹ್ಯಾಪಿ ಪಾಸಿಯಾ ಅರೆಸ್ಟ್‌…..!

ನವದೆಹಲಿ:

     ಪಂಜಾಬ್‌ನಲ್ಲಿ  ಕಳೆದ ವರ್ಷ ನಡೆದಿದ್ದ 14 ಗ್ರೆನೇಡ್ ದಾಳಿಯ  ಆರೋಪಿ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಅಮೆರಿಕದಲ್ಲಿ  ಬಂಧಿಸಲಾಗಿದೆ. ಹ್ಯಾಪಿ ಪಾಸಿಯಾ ವಿರುದ್ಧ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ  ನ್ಯಾಯಾಲಯವು ಜನವರಿಯಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಿತು. ಗ್ರೆನೇಡ್ ದಾಳಿಯ ಬಳಿಕ ಆರೋಪಿ ಹ್ಯಾಪಿ ಪಾಸಿಯಾ ತಲೆಮರೆಸಿಕೊಂಡಿದ್ದು, ಹ್ಯಾಪಿ ಪಾಸಿಯಾನ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ 5 ​​ಲಕ್ಷ ಬಹುಮಾನ ಘೋಷಿಸಿತ್ತು. ಬಳಿಕ ಇದೀಗ ಆತನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

    ಪಂಜಾಬ್‌ನಲ್ಲಿ ಕಳೆದ ಏಳು ತಿಂಗಳುಗಳಲ್ಲಿ 16 ಗ್ರೆನೇಡ್ ದಾಳಿಗಳಾಗಿವೆ. ಪೊಲೀಸ್ ಪೋಸ್ಟ್‌, ಧಾರ್ಮಿಕ ಸ್ಥಳಗಳು ಮತ್ತು ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಸೇರಿದಂತೆ ಸಾರ್ವಜನಿಕ ವ್ಯಕ್ತಿಗಳ ಮನೆಗಳ ಮೇಲೆ ಈ ದಾಳಿಗಳನ್ನು ನಡೆಸಲಾಗಿದೆ. ಒಟ್ಟು 16 ಗ್ರೆನೇಡ್ ದಾಳಿಗಳಲ್ಲಿ ಸುಮಾರು 14 ಪ್ರಕರಣಗಳ ತನಿಖೆಯಲ್ಲಿ ಪಾಸಿಯಾ ಆರೋಪಿಯಾಗಿದ್ದಾನೆ.

   ರಾಷ್ಟ್ರೀಯ ತನಿಖಾ ಸಂಸ್ಥೆಯು ಈ ವರ್ಷದ ಆರಂಭದಲ್ಲಿ 2024ರ ಚಂಡೀಗಢ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬಬ್ಬರ್ ಖಾಲ್ಸಾ ಸೇರಿದಂತೆ ನಾಲ್ವರು ಅಂತಾರಾಷ್ಟ್ರೀಯ ಭಯೋತ್ಪಾದಕರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.ಇದರಲ್ಲಿ ಪಾಸಿಯಾ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಕೂಡ ಸೇರಿದ್ದಾರೆ ಎನ್ನಲಾಗಿದೆ.

   ಗ್ರೆನೇಡ್ ದಾಳಿಯ ಮೂಲಕ ಕಾನೂನು ಜಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಭಯ ಉಂಟು ಮಾಡುವ ಸಂಚನ್ನು ಹ್ಯಾಪಿ ಪಾಸಿಯಾ ಮತ್ತು ರಿಂಡಾ ರೂಪಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದಕ್ಕಾಗಿ ಅವರು ಸ್ಥಳೀಯರಾದ ರೋಹನ್ ಮಾಸಿಹ್ ಮತ್ತು ವಿಶಾಲ್ ಮಾಸಿಹ್ ಎಂಬವರನ್ನು ನೇಮಕ ಮಾಡಿದ್ದರು. ತಮ್ಮ ಸೂಚನೆ ಮೇರೆಗೆ ದಾಳಿ ನಡೆಸುವ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ.

   ಚಂಡೀಗಢ ಗ್ರೆನೇಡ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜನವರಿ 22 ರಂದು ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ 16 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಿದ್ದು ಇದರಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಬೆಂಬಲಿತ ಹರ್ವಿಂದರ್ ಸಿಂಗ್ ಸಂಧು ಮತ್ತು ಅಮೆರಿಕ ಮೂಲದ ಹ್ಯಾಪಿ ಪಾಸಿಯಾ ನಡುವೆ ಸಂಪರ್ಕ ಇರುವುದು ತಿಳಿದುಬಂದಿತ್ತು. 

    2024ರ ಸೆಪ್ಟೆಂಬರ್ 11ರಂದು ಚಂಡೀಗಢದ ಸೆಕ್ಟರ್ 10 ರ ಮನೆಯಲ್ಲಿ ನಡೆದ ಗ್ರೆನೇಡ್ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯವು ಕಳೆದ ಜನವರಿಯಲ್ಲಿ ಹ್ಯಾಪಿ ಪಾಸಿಯಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದಾಗಿ ಕೆಲವು ತಿಂಗಳ ಬಳಿಕ ಇದೀಗ ಆತನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

    ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಸ್ಕಿರತ್ ಸಿಂಗ್ ಚಾಹಲ್ ಅವರನ್ನು ಗುರಿಯಾಗಿಸಿಕೊಂಡು ಈ ಗ್ರೆನೇಡ್ ದಾಳಿ ನಡೆಸಲಾಗಿತ್ತು. ಜಸ್ಕಿರತ್ ಸಿಂಗ್ ಚಾಹಲ್ ಅವರು 1986 ರಲ್ಲಿ ನಕೋದರ್‌ನಲ್ಲಿ ಸ್ಟೇಷನ್ ಹೌಸ್ ಆಫೀಸರ್ (SHO) ಆಗಿದ್ದರು. ಈ ವೇಳೆ ನಾಲ್ವರು ಸಿಖ್ ಪ್ರತಿಭಟನಾಕಾರರು ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು. ಹೀಗಾಗಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನುತ್ತಾರೆ ಪೊಲೀಸರು. ಹ್ಯಾಪಿ ಪಾಸಿಯಾ ಪಂಜಾಬ್‌ನಲ್ಲಿರುವ ತನ್ನ ಸ್ಥಳೀಯ ಸಹಚರರ ಮೂಲಕ ಆರೋಪಿಗಳಿಗೆ ಸ್ಫೋಟಕ, ಶಸ್ತ್ರಾಸ್ತ್ರ ಮತ್ತು ಹಣಕಾಸಿನ ಬೆಂಬಲ ನೀಡಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.