ನವದೆಹಲಿ :
ಹೊಸ ಪಕ್ಷವಾಗಿದ್ದರೂ ಕಳೆದ ಎರಡು ಬಾರಿ ಗೆದ್ದು ದೆಹಲಿಯನ್ನು ಆಳಿದ್ದ ಆಮ್ ಆದ್ಮಿ ಪಕ್ಷವು ಈ ಬಾರಿ ನೆಲ ಕಚ್ಚಿದೆ. 27 ವರ್ಷಗಳ ಬಳಿಕ ಬಿಜೆಪಿ ಗದ್ದುಗೆ ಏರಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ನ್ನೂ ಕಳೆದುಕೊಳ್ಳುವ ಭಯದಲ್ಲಿರುವ ಅರವಿಂದ್ ಕೇಜ್ರಿವಾಲ್ ಪಂಜಾಬ್ ಸಿಎಂ ಭಗವಂತ್ ಮಾನ್ ಸಂಪುಟವನ್ನು ದೆಹಲಿಗೆ ಕರೆಸಿದ್ದಾರೆ. ತಮ್ಮ ಇಡೀ ಸಚಿವ ಸಂಪುಟದೊಂದಿಗೆ ಚಂಡೀಗಢದಿಂದ ದೆಹಲಿಗೆ ತೆರಳಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ರಾಜ್ಯ ಘಟಕದಲ್ಲಿ ಹೆಚ್ಚುತ್ತಿರುವ ಆಂತರಿಕ ಅಸಮಾಧಾನದ ಕುರಿತು ಮಾತುಕತೆ ನಡೆಯುತ್ತಿರುವ ಮಧ್ಯೆ ಪಂಜಾಬ್ನ ತಮ್ಮ ನಾಯಕರ ಸಭೆಯನ್ನು ಕರೆದಿದ್ದಾರೆ. ಕೇಜ್ರಿವಾಲ್ ಅವರು ಬೆಳಗ್ಗೆ 11 ಗಂಟೆಯಿಂದ ದೆಹಲಿಯ ಕಪುರ್ತಲಾ ಹೌಸ್ನಲ್ಲಿ ಭಗವಂತ್ ಮಾನ್, ಅವರ ಸಚಿವರು ಮತ್ತು ಪಂಜಾಬ್ನ ಎಲ್ಲಾ ಶಾಸಕರು ಮತ್ತು ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಪದಚ್ಯುತಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹೇಳಿಕೊಂಡಿವೆ. ಭಗವಂತ್ ಮಾನ್ ದೆಹಲಿಯಲ್ಲಿ ಪ್ರಚಾರ ಮಾಡಿದ್ದ 12ಕ್ಕೆ 12 ಕ್ಷೇತ್ರದಲ್ಲಿ ಎಎಪಿ ಸೋಲು ಕಂಡಿದೆ. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಕ್ಷೇತ್ರವೂ ಇತ್ತು.
ಪಕ್ಷದ ಮೂಲಗಳ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ ಸೋಲಿನ ಚರ್ಚಿಸಲು ಮತ್ತು ಅವರ ಪ್ರತಿಕ್ರಿಯೆ ಪಡೆಯಲು ಕೇಜ್ರಿವಾಲ್ ಪಂಜಾಬ್ ಸಚಿವರು, ಶಾಸಕರು ಮತ್ತು ಸಂಸದರ ಈ ಸಭೆಯನ್ನು ಕರೆದಿದ್ದಾರೆ. ಏಕೆಂದರೆ ಈ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ಪಂಜಾಬ್ ಸಿಎಂ ಭಗವಂತ್ ಮಾನ್, ಅವರ ಸಂಪುಟ ಸಚಿವರು, ಸಂಸದರು, ಶಾಸಕರು ಮತ್ತು ಎಎಪಿ ರಾಜ್ಯ ಘಟಕದ ಪದಾಧಿಕಾರಿಗಳು ಸೇರಿದಂತೆ 200 ಕ್ಕೂ ಹೆಚ್ಚು ನಾಯಕರು ಚುನಾವಣಾ ಪ್ರಚಾರಕ್ಕಾಗಿ ವಾರಗಟ್ಟಲೆ ದೆಹಲಿಯಲ್ಲಿ ಬೀಡುಬಿಟ್ಟಿದ್ದರು.
ದೆಹಲಿ ಚುನಾವಣಾ ಫಲಿತಾಂಶಗಳನ್ನು ವಿಶ್ಲೇಷಿಸುವುದು ಮತ್ತು 2027 ರ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು ಸಭೆಯ ಕಾರ್ಯಸೂಚಿಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಪಂಜಾಬ್‌ನಲ್ಲಿ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲತೆ ಮತ್ತು ಕೇಜ್ರಿವಾಲ್ ಮತ್ತು ಮಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಪಕ್ಷದಲ್ಲಿಊಹಾಪೋಹಗಳೆದ್ದಿವೆ. ಪಂಜಾಬ್ ಅನ್ನು ಭಗವಂತ್ ಮಾನ್ ಆಡಳಿತ ನಡೆಸುತ್ತಿಲ್ಲ, ಬದಲಾಗಿ ದೆಹಲಿಯಲ್ಲಿ ಕುಳಿತು ಅರವಿಂದ್ ಕೇಜ್ರಿವಾಲ್ ಆಡಳಿತ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇಲ್ಲಿ, ಬಿಜೆಪಿ ನಾಯಕ ತರುಣ್ ಚುಗ್ ಅವರು ಪಂಜಾಬ್‌ನಲ್ಲಿ ಮಾನ್ ಸರ್ಕಾರದ ಕೌಂಟ್‌ಡೌನ್ ಪ್ರಾರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಪಂಜಾಬ್‌ನಲ್ಲಿ 30 ಕ್ಕೂ ಹೆಚ್ಚು ಎಎಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.ಕೇಜ್ರಿವಾಲ್ ಸಭೆ ಕರೆದ ನಂತರ, ಪಂಜಾಬ್ ಸರ್ಕಾರ ಸೋಮವಾರ ಸಂಪುಟ ಸಭೆಯನ್ನು ಮುಂದೂಡಿತು, ಸುಮಾರು ಐದು ತಿಂಗಳ ನಂತರ ರಾಜ್ಯದ ಬಜೆಟ್ ಅಧಿವೇಶನದ ದಿನಾಂಕಗಳನ್ನು ನಿರ್ಧರಿಸಲು ಇದನ್ನು ನಡೆಸಬೇಕಾಗಿತ್ತು.
