ತುರುವೇಕೆರೆ:
ಎಪಿಎಂಸಿ ಆವರಣದಲ್ಲಿ ರಾಗಿ ಸುರಿದು ಪ್ರತಿಭಟನೆ
ರಾಗಿ ಖರೀದಿ ಕೇಂದ್ರದಲ್ಲಿ ಕೂಡಲೇ ನೋಂದಣಿ ಪ್ರಾರಂಭಿಸಬೇಕು ಎಂದು ರೈತಸಂಘದ ಸದಸ್ಯರು ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಸುರಿಯುವುದರ ಮೂಲಕ ಬುಧವಾರ ವಿನೂತನ ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾಳಕೆರೆ ನಾಗೇಂದ್ರ ಮಾತನಾಡಿ, ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಬೇಕು. ರೈತರ ನೋಂದಣಿ ಮತ್ತು ಖರೀದಿ ಕಾರ್ಯವನ್ನು 2021ರ ಡಿ. 28 ರಿಂದ 2022 ನೇ ಮಾ. 31 ರವರೆಗೂ ನೋಂದಣಿ ಕಾರ್ಯ ಇದ್ದರೂ ಸಹ ಈಗಾಗಲೇ ನೋಂದಣಿ ಸ್ಥಗಿತಗೊಳಿಸಲಾಗಿದೆ.
ಕರ್ನಾಟಕ ಸರ್ಕಾರದ ಆದೇಶದಂತೆ ಜ. 1 ರಿಂದ ಜ. 21 ರ ವರೆಗೆ ಕೇವಲ 10 ದಿನಗಳು ಮಾತ್ರ ನೋಂದಣಿ ಮಾಡಿ, ಇದೀಗ ನೋಂದಣಿ ಸ್ಥಗಿತಗೊಳಿಸಿ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ದೂರಿದರು.
ರಾಗಿ ಖರೀದಿ ಕೇಂದ್ರದ ಮುಂದೆ ಪ್ರತಿಭಟಿಸಿದ ರೈತರು, ನಂತರ ತಾವು ಮಾರಲು ತಂದಿದ್ದ ರಾಗಿಯನ್ನು ಎಪಿಎಂಸಿ ಕಚೇರಿ ಮುಂಭಾಗ ಸುರಿದು ಪ್ರತಿಭಟಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ತಾಳ್ಕೆರೆ ಮಂಜಣ್ಣ, ರೈತರಾದ ನಂಜಪ್ಪ, ಕುಮಾರ್, ಮಂಜುನಾಥ್, ಕುಮಾರಸ್ವಾಮಿ, ಕೃಷ್ಣೇಗೌಡ, ಉಮೇಶ್, ರಾಮಸ್ವಾಮಿ, ರಂಗಪ್ಪ, ರಾಮೇಗೌಡ, ಪಂಚಾಕ್ಷರಿ, ಚಂದ್ರಯ್ಯ ಇತರರು ಇದ್ದರು.
ರಾಗಿ ಖರೀದಿ ಕೇಂದ್ರದಲ್ಲಿ ಕೂಡಲೇ ನೋಂದಣಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ರೈತರು ಬುಧವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಸುರಿಯುವುದರ ಮೂಲಕ ಪ್ರತಿಭಟಿಸಿದರು.
ಕಷ್ಟಪಟ್ಟು ಬೆಳೆದ ಬೆಳೆಗೆ ಕಡಿಮೆ ಬೆಲೆ :
ಮಾ. 31 ರ ವರೆಗೆ ಅವಕಾಶ ಇದೆಯೆಂದು ಹಲವು ರೈತರು ನೋಂದಣಿ ಮಾಡಿಸಿರುವುದಿಲ್ಲ ಹಾಗೂ ದೊಡ್ಡ ಹಿಡುವಳಿದಾರರ ನೋಂದಣಿಯನ್ನು ಮಾಡಿಕೊಂಡಿಲ್ಲ, ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆದ ರಾಗಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಹಿಂದಿನ ವರ್ಷದಲ್ಲಿ ರಾಗಿ ಖರೀದಿಸಿದಂತೆಯೇ ಈ ವರ್ಷವೂ ಎಲ್ಲಾ ರೈತರ ರಾಗಿ ನೋಂದಣಿ ಮತ್ತು ಖರೀದಿಗೆ ಸರ್ಕಾರ ಮುಂದಾಗಬೇಕೆಂದು ತಾಳಕೆರೆ ನಾಗೇಂದ್ರ ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ