ವಾಷಿಂಗ್ಟನ್:
ಭಾನುವಾರ ಉಕ್ರೇನ್ ವಿರುದ್ಧ ರಷ್ಯಾ ಮಾರಣಾಂತಿಕ ಡ್ರೋನ್ ದಾಳಿ ನಡೆಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಳಿ ಕೆಂಡವಾಗಿದ್ದಾರೆ.
ಯುದ್ಧ ಪೀಡಿತ ಉಭಯ ರಾಷ್ಟ್ರಗಳು ದೊಡ್ಡ ಪ್ರಮಾಣದ ಕೈದಿಗಳ ವಿನಿಮಯ ಪೂರ್ಣಗೊಳಿಸಿದರೂ ರಷ್ಯಾ ಮತ್ತೆ ಡ್ರೋನ್ ದಾಳಿ ನಡೆಸಿ ಹಲವರ ಸಾವಿಗೆ ಕಾರಣವಾಗಿರುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ‘crazy'(ಅತ್ಯುತ್ಸಾಹಿ/ಹುಚ್ಚ) ಎಂದು ಟ್ರಂಪ್ ಕರೆದಿದ್ದಾರೆ. ಭಾನುವಾರ ರಾತ್ರಿ ಉಕ್ರೇನ್ ವಿರುದ್ಧ ರಷ್ಯಾ ಬೃಹತ್ ಡ್ರೋನ್ ದಾಳಿ ನಡೆಸಿದ್ದರಿಂದ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತಾಳ್ಮೆ ಕಳೆದುಕೊಳ್ಳುತ್ತಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದು, ರಷ್ಯಾದ ನಾಯಕನ ವಿರುದ್ಧ ತೀಕ್ಷ್ಣವಾಗಿ ಟೀಕೆಗಳನ್ನು ಮಾಡಿದ್ದಾರೆ. ಪುಟಿನ್ ಜೊತೆಗೆ ಯಾವಾಗಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಅವರಿಗೆ ಏನೋ ಆಗಿದೆ. ಅವರು ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ! ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಉಕ್ರೇನ್‌ನ ಎಲ್ಲಾ ಭಾಗಗಳನ್ನು ಅವರು ಬಯಸುತ್ತಾರೆ ಎಂದು ನಾನು ಯಾವಾಗಲೂ ಹೇಳಿದ್ದೇನೆ ಮತ್ತು ಬಹುಶಃ ಅದು ಸರಿ ಎಂದು ಸಾಬೀತಾಗಿದೆ. ಆದರೆ ಪುಟಿನ್ ಹಾಗೆ ಮಾಡಿದರೆ, ಅದು ರಷ್ಯಾದ ಅವನತಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪುಟಿನ್ ವಿರುದ್ಧ ಆಗಾಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಟ್ರಂಪ್ ಈಗ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಉಕ್ರೇನ್ ಜೊತೆಗಿನ ಕದನ ವಿರಾಮ ಮಾತುಕತೆಗಳಲ್ಲಿ ರಷ್ಯಾದ ಬಗ್ಗೆ ಹೆಚ್ಚುತ್ತಿರುವ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಉಕ್ರೇನ್ ಮೇಲಿನ ದಾಳಿಯಿಂದ ಸಂತೋಷಗೊಂಡಿಲ್ಲ. ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೆಚ್ಚಿಸುವ ಬಗ್ಗೆ ಸಂಪೂರ್ಣವಾಗಿ ಪರಿಗಣಿಸುತ್ತಿರುವುದಾಗಿ ತಿಳಿಸಿದರು. ದೀರ್ಘಕಾಲದಿಂದ ಪುಟಿನ್ ನನ್ನಗೆ ಚೆನ್ನಾಗಿ ಗೊತ್ತು. ಯಾವಾಗಲೂ ಆತನೊಂದಿಗೆ ಬೆರೆಯುತ್ತೇನೆ. ಆದರೆ ಆತ ನಗರಗಳಿಗೆ ರಾಕೆಟ್ ಕಳುಹಿಸಿ, ಜನರನ್ನು ಕೊಲ್ಲುವುದು ನನಗೆ ಇಷ್ಟವಿಲ್ಲ ಎಂದು ಅವರು ಹೇಳಿದರು.
