ವ್ಲಾಡಿಮಿರ್ ಪುಟಿನ್ ಭಾರತ ಭೇಟಿ: ರಕ್ಷಣಾ ಸಹಕಾರ ಒಪ್ಪಂದದ ನಿರೀಕ್ಷೆ

ನವದೆಹಲಿ: 

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ಅವರು ಇದೇ ಮೊದಲ ಭಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ಭಾರತಕ್ಕೆ ಆಗಮಿಸಲಿರುವ ಅವರು ಡಿಸೆಂಬರ್ 5ರಂದು ಹಿಂದಿರುಗಲಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ  ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಪುಟಿನ್ ಅವರು ಈ ಸಂದರ್ಭದಲ್ಲಿ ದೊಡ್ಡ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಇದರಲ್ಲಿ ಉನ್ನತ ಮಟ್ಟದ ರಕ್ಷಣಾ ಸಹಕಾರ ಮತ್ತು ಹೊಸ ಎಸ್-400 ಕ್ಷಿಪಣಿ ಒಪ್ಪಂದದ ಕಾರ್ಯಸೂಚಿಯು ಇರುವ ಸಾಧ್ಯತೆ ಇದೆ.

    ವ್ಲಾಡಿಮಿರ್ ಪುಟಿನ್ ಅವರು 23ನೇ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಇವರ ಈ ಭೇಟಿಯು ರಷ್ಯಾ ಮತ್ತು ಉಕ್ರೇನ್ ಯುದ್ಧ ಮತ್ತು ಭಾರತದ ಆಪರೇಷನ್ ಸಿಂದೂರ್ ಬಳಿಕ ನಡೆಯುವ ಮೊದಲ ಭೇಟಿಯಾಗಿದೆ. ಈ ಸಂದರ್ಭದಲ್ಲಿ ಅವರು ರಕ್ಷಣಾ ಸಹಕಾರ, ಹೊಸ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಒಪ್ಪಂದ ಅಂತಿಮಗೊಳಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಲಿದೆ. 

    ಭಾರತೀಯ ವಾಯುಪಡೆಗೆ ಎರಡರಿಂದ ಮೂರು ಹೆಚ್ಚುವರಿ ಎಸ್-400 ರೆಜಿಮೆಂಟ್‌ಗಳನ್ನು ಪೂರೈಸುವ ಮಾಸ್ಕೋದ ಪ್ರಸ್ತಾಪವು ಈ ಸಂದರ್ಭದಲ್ಲಿ ಚರ್ಚೆಯಾಗಲಿದೆ. ರಷ್ಯಾದ ಮಿಲಿಟರಿ ಉಪಕರಣಗಳ ಮೇಲಿನ ಅವಲಂಬನೆಯಲ್ಲಿ ಭಾರತದ ಪಾಲು ಹೆಚ್ಚಾಗಿದೆ. ಶೇಕಡಾ 60-70 ರಷ್ಟು ಮಿಲಿಟರಿ ಉಪಕರಣವನ್ನು ಭಾರತ ರಷ್ಯಾದಿಂದ ಆಮದು ಮಾಡಿಕೊಂಡಿದೆ. ಆದರೆ ಕಳೆದ ದಶಕದಿಂದ ರಷ್ಯಾದ ಶಸ್ತ್ರಾಸ್ತ್ರ ಆಮದುಗಳ ಪಾಲು ತೀವ್ರವಾಗಿ ಕುಸಿತಗೊಳ್ಳುತ್ತಿದೆ. ಈ ನಡುವೆಯೂ ಭಾರತದ ರಕ್ಷಣಾ ಸನ್ನದ್ಧತೆಯನ್ನು ರೂಪಿಸುವಲ್ಲಿ ರಷ್ಯಾ ನಿರ್ಣಾಯಕ ಪಾತ್ರ ವಹಿಸಿದೆ.

    ಆತ್ಮನಿರ್ಭರ ಭಾರತವು ದೇಶೀಯ ರಕ್ಷಣಾ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ. ಇದರಿಂದಾಗಿ ಭಾರತದ ಶಸ್ತ್ರಾಸ್ತ್ರ ಆಮದುಗಳಲ್ಲಿ ಶೇ. 76ರಷ್ಟು 2009ರಲ್ಲಿ ರಷ್ಯಾದಿಂದ ಬಂದಿದ್ದರೆ 2024ರಲ್ಲಿ ಇದು ಶೇ. 36ಕ್ಕೆ ಇಳಿದಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್   ಅಂಕಿ ಅಂಶಗಳು ತಿಳಿಸಿವೆ.

    ರಕ್ಷಣಾ ಪಾಲುದಾರರಲ್ಲಿ ಭಾರತವು ಫ್ರಾನ್ಸ್ ಮತ್ತು ಯುಎಸ್ ಅನ್ನು ಕೂಡ ಸೇರಿಸಿದೆ. ಆದರೆ ರಷ್ಯಾದೊಂದಿಗೆ ಎಸ್-400, ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಮತ್ತು ಟಿ-90 ಟ್ಯಾಂಕ್‌ಗಳಂತಹ ಜಂಟಿ ಯೋಜನೆಗಳನ್ನು ಇನ್ನೂ ನಿರ್ವಹಿಸುತ್ತಿದೆ. ರಷ್ಯಾದ ರಕ್ಷಣಾ ಸಂಸ್ಥೆ ರೋಸ್ಟೆಕ್ ಈಗಾಗಲೇ ಹೊಸ ಎಸ್-400 ಒಪ್ಪಂದಕ್ಕಾಗಿ ಭಾರತದೊಂದಿಗೆ ಮಾತುಕತೆ ನಡೆಸಿದ್ದು, ಸಮಯಕ್ಕೆ ಸರಿಯಾಗಿ ವಿತರಣೆ ಮಾಡುವ ಭರವಸೆಯನ್ನೂ ನೀಡಿದೆ ಎನ್ನಲಾಗಿದೆ.

    ಎಸ್-400 ಕ್ಷಿಪಣಿ ತಯಾರಿಗೆ ಸಂಬಂಧಿಸಿ ಶೇ. 50 ರಷ್ಟು ತಂತ್ರಜ್ಞಾನ ಮಾಹಿತಿಯನ್ನು ಭಾರತಕ್ಕೆ ನೀಡಲು ರಷ್ಯಾ ಸಿದ್ಧವಾಗಿದೆ. ಇದರಿಂದಾಗಿ ಇದರ ನಿರ್ಮಾಣ ಕಾರ್ಯದಲ್ಲಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನಂತಹ ಭಾರತೀಯ ಕಂಪೆನಿಗಳು ಕೈಜೋಡಿಸಲಿದೆ. ಇದರ ಮುಖ್ಯ ಉದ್ದೇಶ ವೆಚ್ಚವನ್ನು ಕಡಿಮೆ ಮಾಡಿ ದೇಶೀಯ ರಕ್ಷಣಾ ಸಾಮರ್ಥ್ಯಗಳನ್ನು ಬೆಳೆಸುವುದಾಗಿದೆ. ಇದು ಭಾರತದ ಸುಧಾರಿತ ರಕ್ಷಣಾ ವ್ಯವಸ್ಥೆಗಳ ಮೇಲೆ ಸ್ವಾವಲಂಬನೆಯ ಗುರಿಯತ್ತ ಒಂದು ಪ್ರಮುಖ ಹೆಜ್ಜೆಯಾಗಲಿದೆ.

Recent Articles

spot_img

Related Stories

Share via
Copy link