ಬೆಂಗಳೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 6 ತಿಂಗಳು ಕಳೆದ ನಂತರ ವಿಧಾನಸಭೆಗೆ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿದ್ದು, ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್ ಅಶೋಕ್ ಅವರನ್ನು ಹೈಕಮಾಂಡ್ ನೇಮಕ ಮಾಡಿದೆ.
ವಿರೋಧ ಪಕ್ಷದ ನಾಯಕನೆಂದು ನಿನ್ನೆ ಬೆಂಗಳೂರಿನಲ್ಲಿ ಘೋಷಣೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ನಾನು ಜೋಡೆತ್ತುಗಳಾಗಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಾಗಿವೆ. ಅಧಿಕಾರಕ್ಕೆ ಬಂದ ತಕ್ಷಣವೇ ವರ್ಗಾವಣೆ ದಂಧೆ ಶುರು ಮಾಡಿದೆ. ಕಾಂಗ್ರೆಸ್ನವರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಆದರೆ ಗ್ಯಾರಂಟಿ ಯೋಜನೆ ಶೇಕಡಾ 50ರಷ್ಟು ಜನರಿಗೂ ತಲುಪಿಲ್ಲ ಎಂದು ಟೀಕಿಸಿದರು.
ನಾವು ಅಧಿಕಾರದಲ್ಲಿದ್ದಾಗ ರೈತರ ಪರ ನಿಂತಿದ್ದೆವು. ಆದರೆ ಈಗ ಕಾಂಗ್ರೆಸ್ ಸರ್ಕಾರ ರೈತರ ಯೋಜನೆಗಳನ್ನೇ ನಿಲ್ಲಿಸಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ನಮ್ಮ ಶಾಸಕರ ಅನುದಾನ ಕಡಿತಗೊಳಿಸಿದ್ದಾರೆ.
ಜೆಡಿಎಸ್ ಜತೆ ಸೇರಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಸಮರ್ಥ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತೇವೆ. ಬಿಜೆಪಿಯ 66, ಜೆಡಿಎಸ್ 19 ಶಾಸಕರು ಸೇರಿ ಹೋರಾಟ ಮಾಡುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವುದೇ ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
ನನ್ನನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಧನ್ಯವಾದ ಹೇಳುತ್ತೇನೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ನಮ್ಮ ಶಾಸಕರಿಗೂ ಧನ್ಯವಾದ ಹೇಳುತ್ತೇನೆ. ತುರ್ತುಪರಿಸ್ಥಿತಿ ವೇಳೆ ಹೋರಾಟ ಮಾಡಿ 1 ತಿಂಗಳು ಜೈಲಿಗೆ ಹೋಗಿದ್ದೆ. 20 ವರ್ಷಗಳ ಕಾಲ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಪರಿಗಣನೆ ಮಾಡಿ ನನಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ದಾರೆ ಎಂದರು.