ರಾಮನಗರ
ನವದೆಹಲಿಯಲ್ಲಿ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ರಾಜಕಾರಣದಲ್ಲಿ ಕನಕಪುರ ಬಂಡೆ ಎಂದೇ ಖ್ಯಾತರಾಗಿರುವ ಡಿ. ಕೆ. ಶಿವಕುಮಾರ್ ಎದುರು ಕಂದಾಯ ಸಚಿವ ಆರ್. ಅಶೋಕ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.
ಕನಕಪುರದಲ್ಲಿ ಆರ್. ಅಶೋಕ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಲೆಕ್ಕಾಚಾರದಂತೆ ಕೆಪಿಸಿಸಿ ಅಧ್ಯಕ್ಷರನ್ನು ಸೋಲಿಸಬೇಕು ಎಂದು ಬಿಜೆಪಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್. ಅಶೋಕರನ್ನು ಅದೇ ಸಮುದಾಯದ ಮತ್ತೊಬ್ಬ ಪ್ರಭಾವಿ ನಾಯಕ ಡಿ. ಕೆ. ಶಿವಕುಮಾರ್ ಎದುರು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಸತತವಾಗಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿ. ಕೆ. ಶಿವಕುಮಾರ್ ಕನಕಪುರವನ್ನು ಬಿಜೆಪಿಯ ಭದ್ರಕೋಟೆಯಾಗಿ ಮಾಡಿಕೊಂಡಿದ್ದಾರೆ. ಅಲ್ಲದೇ ರಾಮನಗರ ಜಿಲ್ಲೆಯಲ್ಲಿ ಡಿಕೆಶಿ ಸಹೋದರರ ಪ್ರಭಾವವೂ ಅಧಿಕವಾಗಿದೆ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದ್ದರಿಂದ ಅವರನ್ನು ಸೋಲಿಸಲು ಬಿಜೆಪಿ ತಂತ್ರ ರೂಪಿಸಿದೆ.
ಸಾತನೂರು ಕ್ಷೇತ್ರದಿಂದ ಡಿ. ಕೆ. ಶಿವಕುಮಾರ್ 2008ರಲ್ಲಿ ಕನಕಪುರಕ್ಕೆ ಬಂದರು. ಬಳಿಕ ನಡೆದ 3 ಚುನಾವಣೆಯಲ್ಲಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಅವರ ಗೆಲುವಿನ ಅಂತರ ಹೆಚ್ಚುತ್ತಲೇ ಇದೆ. 2008ರಲ್ಲಿ 7,179 ಮತಗಳ ಅಂತರದಿಂದ ಗೆದ್ದಿದ್ದ ಡಿ. ಕೆ. ಶಿವಕುಮಾರ್ 2018ರಲ್ಲಿ 79,909 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ತಮಗೆ ಎದುರಾಳಿ ಇಲ್ಲ ಎಂದು ಸಾಬೀತು ಮಾಡಿದ್ದಾರೆ.