ಗಂಗಾರತಿ ಅಧ್ಯಯನಕ್ಕೆ ತಂಡ : ಆರ್‌ ಅಶೋಕ್‌ ಗರಂ….!

ಬೆಂಗಳೂರು

    ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ  ಅಧ್ಯಕ್ಷತೆಯಲ್ಲಿ ಕಾವೇರಿ ಆರತಿ ಅಧ್ಯಯನ ಸಮಿತಿ ಈಗಾಗಲೆ ಹರಿದ್ವಾರಕ್ಕೆ ತೆರಳಿ ಗಂಗಾರತಿ ಪ್ರಕ್ರಿಯೆ ಬಗ್ಗೆ ಅಧ್ಯಯನ ಮಾಡಿಕೊಂಡು ಬಂದಿದೆ. ಇದೀಗ ಅಧಿಕಾರಿಗಳ ನಿಯೋಗ ಅಧ್ಯಯನಕ್ಕೆಂದು ಹರಿದ್ವಾರಕ್ಕೆ ತೆರಳು ಸಜ್ಜಾಗಿದೆ ಎಂದು ವರದಿಯಾಗಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್​ ಅಶೋಕ್  ಕಾಂಗ್ರೆಸ್​ ಸರ್ಕಾರವನ್ನು   ತರಾಟೆಗೆ ತೆಗೆದುಕೊಂಡಿದ್ದಾರೆ.

  “ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸುವ ಸಲುವಾಗಿ ಮಂಡ್ಯ ಉಸ್ತುವಾರಿ ಸಚಿವ ಎನ್​ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್‌ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿರುವಾಗ ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಕಳುಹಿಸುತ್ತಿರುವುದು ಯಾತಕ್ಕೆ?” ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ ಮುಖಾಂತರ ಪ್ರಶ್ನಿಸಿದ್ದಾರೆ.

   ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಹೋಗಬೇಕು ಎನ್ನುವುದಾದರೆ ಸಚಿವರು ತಮ್ಮ ತಂಡದೊಂದಿಗೆ ಅಲ್ಲಿ ಹೋಗಿ ಮಾಡಿದ್ದಾದರೂ ಏನು? ಸರ್ಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡಲು ಹೋಗಿದ್ದಾ? ಎಂದು ವಾಗ್ದಾಳಿ ಮಾಡಿದ್ದಾರೆ. 

   “ಅಯೋಧ್ಯೆ ರಾಮಮಂದಿರದ ಉದ್ಘಾಟನೆ ವೇಳೆ 30 ವರ್ಷ ಹಳೆ ಕೇಸುಗಳನ್ನು ರೀ ಓಪನ್ ಮಾಡಿ ಕರಸೇವಕರನ್ನ ಜೈಲಿಗೆ ಹಾಕಿದ್ದ ಈ ಕಾಂಗ್ರೆಸ್ ಸರ್ಕಾರ, ಗಣೇಶನ ಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸಿದ ಈ ಕಾಂಗ್ರೆಸ್ ಸರ್ಕಾರ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಯನ್ನ ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ತಿಪ್ಪೆ ಸಾರಿಸಿದ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ಹಿಂದೂ ಧರ್ಮದ ಬಗ್ಗೆ, ಹಿಂದೂಗಳ ಆಚಾರ-ವಿಚಾರದ ಬಗ್ಗೆ, ಸಂಪ್ರದಾಯ-ಪರಂಪರೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುವ ನಾಟಕ ಮಾಡುತ್ತಿದೆ” ಎಂದು ಆರೋಪಿಸಿದರು.

    ನಿಮಗೆ ನಿಜವಾಗಿಯೂ ದೇಶ-ಧರ್ಮದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಬ್ರದರ್ಸ್ ಗಳನ್ನ ಒದ್ದು ಒಳಗೆ ಹಾಕಿ, ನಾಗಮಂಗಲದಲ್ಲಿ, ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಎಬ್ಬಿಸಿದ ಬ್ರದರ್ಸ್​ಗಳನ್ನು ಒದ್ದು ಒಳಗೆ ಹಾಕಿ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ಪುಂಡಾಟಿಕೆ ಮಾಡಿದ ಬ್ರದರ್ಸ್​ಗಳನ್ನ ಒದ್ದು ಒಳಗೆ ಹಾಕಿ. ಅದು ಬಿಟ್ಟು ಬರೀ ತೋರಿಕೆಗೆ ಕಾವೇರಿ ಆರತಿ ಮಾಡುವ ನಾಟಕ ಮಾಡಿದರೆ ಆ ತಾಯಿ ಕಾವೇರಿ ಮೆಚ್ಚುತ್ತಾಳಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Recent Articles

spot_img

Related Stories

Share via
Copy link
Powered by Social Snap