ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆದ ಆರ್‌.ವೈಶಾಲಿ

ಸಮರ್‌ಖಂಡ್‌ 

    ಸೋಮವಾರ ನಡೆದಿದ್ದ ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌  11ನೇ ಮತ್ತು ಅಂತಿಮ ಸುತ್ತಿನಲ್ಲಿ ಮಾಜಿ ವಿಶ್ವ ಮಹಿಳಾ ಚಾಂಪಿಯನ್‌ ಝೊಂಗ್‌ಯಿ ತಾನ್ ವಿರುದ್ಧ ಕಠಿಣ ಡ್ರಾ ಸಾಧಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ  ಸತತ ಎರಡನೇ ಬಾರಿ ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿದರು. ಈ ಸಾಧನೆ ಮೂಲಕ ಮುಂದಿನ ವರ್ಷದ ಪ್ರತಿಷ್ಠಿತ ಮಹಿಳಾ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನೂ ಸಂಪಾದಿಸಿದರು.

   ವೈಶಾಲಿ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದ ಭಾರತದ ಮೂರನೇ ಆಟಗಾರ್ತಿ. ಜಾರ್ಜಿಯಾದ ಬಟುಮಿಯಲ್ಲಿ ವಿಶ್ವಕಪ್‌ ಗೆದ್ದುಕೊಂಡಿದ್ದ ದಿವ್ಯಾ ದೇಶಮುಖ್ ಮತ್ತು ರನ್ನರ್ ಅಪ್‌ ಆಗಿದ್ದ ಕೋನೇರು ಹಂಪಿ ಅವರು ಈ ಮೊದಲೇ ಅರ್ಹತೆ ಪಡೆದಿದ್ದರು. ಕ್ಯಾಂಡಿಡೇಟ್ಸ್ ವಿಜೇತರು ಹಾಲಿ ವಿಶ್ವ ಚಾಂಪಿಯನ್‌ ಗುಕೇಶ್ ಅವರಿಗೆ ಸವಾಲು ಹಾಕುವ ಅರ್ಹತೆ ಪಡೆಯುತ್ತಾರೆ.

   ಈ ಟೂರ್ನಿಯಲ್ಲಿ ವೈಶಾಲಿ ಆರು ಪಂದ್ಯ ಗೆದ್ದು, ಒಂದು ಸೋತು, ನಾಲ್ಕು ಡ್ರಾ ಮಾಡಿಕೊಂಡರು. ಅಜರ್‌ಬೈಜಾನ್‌ನ ಉಲ್ವಿಯಾ ಫತಾಲಿಯೇವಾ ಜತೆ ಡ್ರಾ ಮಾಡಿಕೊಂಡ ರಷ್ಯಾದ ಕ್ಯಾತರಿನಾ ಲಾಗ್ನೊ ಕೂಡ ಎಂಟು ಅಂಕ ಪಡೆದರೂ ಟೈಬ್ರೇಕರ್‌ನಲ್ಲಿ ಎರಡನೇ ಸ್ಥಾನಕ್ಕೆ ಸರಿದರು. ಈ ಟೂರ್ನಿಯಿಂದ ಇಬ್ಬರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವ ಕಾರಣ ಲಾಗ್ನೊ ಸಹ ಅವಕಾಶ ಪಡೆದರು.

   ಕಜಾಕಸ್ತಾನದ ಬಿಬಿಸಾರ ಅಸುನ್‌ಬಯೇವಾ, ಚೀನಾದ ತಾನ್‌ ಝೊಂಗ್‌ಯಿ ಮತ್ತು ಯಕ್ಸಿನ್ ಸಾಂಗ್ (ತಲಾ 7.5) ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು. ಓಪನ್ ವಿಭಾಗದಲ್ಲಿ ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಅನಿಶ್‌ ಗಿರಿ ಎಂಟು ಅಂಕ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಮಥಾಯಸ್‌ ಬ್ಲೂಬಾಮ್, ಹಿಕಾರು ನಕಾಮುರಾ (ರೇಟಿಂಗ್ ಆಧಾರ), ಆರ್‌.ಪ್ರಜ್ಞಾನಂದ ಮತ್ತು ಫ್ಯಾಬಿಯಾನ ಕರುವಾನ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವುದು ಖಚಿತವಾಗಿದೆ.‌

Recent Articles

spot_img

Related Stories

Share via
Copy link