2019ರ ಮಾನನಷ್ಟ ಮೊಕದ್ದಮೆ : ರಾಹುಲ್‌ ಗಾಂಧಿ ಜಾಮೀನು ವಿಸ್ತರಣೆ

ನವದೆಹಲಿ 

      2019ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜಾಮೀನನ್ನು ವಿಸ್ತರಣೆ ಮಾಡಲಾಗಿದೆ. ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ತೀರ್ಪಿನವರೆಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತು ಮಾಡಲಾಗಿದೆ.

      ‘ಮೋದಿ ಉಪನಾಮ’ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ಸೂರತ್‌ನ ಸೆಷನ್ಸ್ ನ್ಯಾಯಾಲಯವು ಕಳೆದ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ಜಾಮೀನು ವಿಸ್ತರಣೆ ಮಾಡಿದೆ.

       ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಮಧ್ಯಾಹ್ನ ಗುಜರಾತ್‌ನ ಸೂರತ್‌ನ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ಅವರಿಗೆ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಮೇಲ್ಮನವಿಯನ್ನು ಸಲ್ಲಿಸಲು ಸಮಯಾವಕಾಶ ನೀಡಲು ಮಾಜಿ ಸಂಸದರಿಗೆ ಜಾಮೀನು ನೀಡಲಾಗಿತ್ತು.

        ರಾಹುಲ್ ಗಾಂಧಿಯ ಜಾಮೀನನ್ನು ಏಪ್ರಿಲ್ 13 ರವರೆಗೆ ವಿಸ್ತರಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನಾಂಕ ಏಪ್ರಿಲ್ 13 ರಂದು ಅವರ ಮನವಿಯನ್ನು ಕೈಗೆತ್ತಿಕೊಳ್ಳಲಿದೆ. ಈ ಕ್ರಿಮಿನಲ್ ಮಾನನಷ್ಟ ಪ್ರಕರಣದಿಂದಾಗಿ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಇದರ ಜೊತೆಗೆ ಅವರಿಗೆ ನೀಡಲಾದ ದೆಹಲಿ ಬಂಗಲೆಯನ್ನು ಕಿತ್ತುಕೊಳ್ಳಲಾಗಿದೆ. ಸೂರತ್‌ನ ನ್ಯಾಯಾಲಯಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೆಲ್ ಮತ್ತು ಹಿಮಾಚಲ ಪ್ರದೇಶದ ಸಿಎಂ ಸುಕ್ವಿಂದರ್ ಸಿಂಗ್ ಸುಖು ಸಾಥ್ ನೀಡಿದ್ದರು.

      ತೀರ್ಪಿನ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ” ‘ಮಿತ್ರಕಾಲ’ದ ವಿರುದ್ಧ ಪ್ರಜಾಪ್ರಭುತ್ವ ಉಳಿಸುವ ಹೋರಾಟ ಇದಾಗಿದೆ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನ್ನ ಆಸರೆ..!” ಎಂದು ಟ್ವೀಟ್ ಮಾಡಿದ್ದಾರೆ.

      ಇದಕ್ಕೂ ಮುನ್ನ ಮಾತನಾಡಿದ್ದ ರಾಜ್ಯಸಭಾ ಸಂಸದ ಅಭಿಷೇಕ್ ಸಿಂಘ್ವಿ , “ವಿಚಾರಣಾ ನ್ಯಾಯಾಲಯದ ಸ್ಪಷ್ಟ ದೋಷಗಳನ್ನು ಮೇಲ್ಮನವಿಯಲ್ಲಿ ನ್ಯಾಯಾಲಯವು ಎತ್ತಿ ಹಿಡಿಯುತ್ತದೆ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ” ಎಂದಿದ್ದರು. ಇವರು ರಾಹುಲ್ ಗಾಂಧಿ ಅವರ ಕಾನೂನು ತಂಡವನ್ನು ಮೇಲ್ವಿಚಾರಣೆ ಮಾಡುವ ಮತ್ತು ಸಲಹೆ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap