ವಯನಾಡು ಭೂಕುಸಿತ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ : ರಾಹುಲ್‌ ಗಾಂಧಿ

ನವದೆಹಲಿ:

    ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇಂದು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ವಯನಾಡು ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ವಯನಾಡು ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಅಗತ್ಯ ಇದೆ ಎಂದು ಒತ್ತಿ ಹೇಳಿದರು.

   “ನಾನು ವಯವನಾಡು ಭೂಕುಸಿತವನ್ನು ನನ್ನ ಕಣ್ಣಾರೆ ನೋಡಿದ್ದೇನೆ, ದುರಂತ ಸಂಭವಿಸಿದ ವಿವಿಧ ಸ್ಥಳಗಳಿಗೆ ನಾನು ಭೇಟಿ ನೀಡಿದ್ದೇನೆ. ಕೆಲವು ಕೆಲವು ಸ್ಥಳಗಳಲ್ಲಿ, ಇಡೀ ಕುಟುಂಬ ಕಣ್ಮರೆಯಾಗಿವೆ, ಇನ್ನು ಕೆಲವು ಕುಟುಂಬಗಳಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ದುರಂತದ ಸಂದರ್ಭದಲ್ಲಿ ನೆರವಾದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

   “ಭೀಕರ ಭೂಕುಸಿತದಲ್ಲಿ 200 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು ಅಪಾರ ಸಂಖ್ಯೆಯ ಜನ ಕಾಣೆಯಾಗಿದ್ದಾರೆ. ಅಂತಿಮವಾಗಿ ಮೃತರ ಸಂಖ್ಯೆ 400 ಮೀರಬಹುದು” ಎಂದು ರಾಹುಲ್ ಗಾಂಧಿ ಹೇಳಿದರು.ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳ ನೆರವಿಗಾಗಿ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದ ಕೇಂದ್ರ ಪಡೆಗಳು ಮತ್ತು ಸೇನೆಯ ಕಾರ್ಯವನ್ನು ಶ್ಲಾಘಿಸಿದ ರಾಹುಲ್ ಗಾಂಧಿ, ಇತರ ಸಮುದಾಯಗಳು ತೋರಿದ ಏಕತೆಯನ್ನು ಎತ್ತಿ ತೋರಿಸಿದರು.

   “ವಿಭಿನ್ನ ಸಿದ್ಧಾಂತಗಳನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳ ಜನ ಸಹಾಯ ಮಾಡಲು ಒಗ್ಗೂಡಿರುವುದನ್ನು ನೋಡಿ ಸಂತೋಷವಾಗಿದೆ” ಎಂದರು.”ಇದು ಒಂದು ದೊಡ್ಡ ದುರಂತ”ವಾಗಿದ್ದು, ಸಮಗ್ರ ಪುನರ್ವಸತಿ ಪ್ಯಾಕೇಜ್ ಒದಗಿಸಬೇಕು ಮತ್ತು ವಿಪತ್ತು-ನಿರೋಧಕ ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಒತ್ತಾಯಿಸಿದರು.

Recent Articles

spot_img

Related Stories

Share via
Copy link
Powered by Social Snap