ಬೆಂಗಳೂರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸುಳ್ಳು ಭರಸವೆಗಳನ್ನು ನೀಡಿ, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಪ್ರಜ್ಞಾವಂತ ನಾಡಿನ ಜನರಿಗೆ ಕಾಂಗ್ರೆಸ್ ಏನೆಂಬುದರ ಬಗ್ಗೆ ಅರಿವಿದೆ ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕರ್ನಾಟಕ ಚುನಾವಣಾ ಸಂದರ್ಭದಲ್ಲಿ ಮತ್ತೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ, ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬಂದ ಹತ್ತೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಐದು ವರ್ಷವಾದರೂ ಈ ಆಶ್ವಾಸನೆ ಈಡೇರಿಲ್ಲ ಎಂದು ಟೀಕಿಸಿದರು.
ರಾಜಸ್ಥಾನದಲ್ಲಿ ಚುನಾವಣೆಗೂ ಮುಂಚೆ ನಿರುದ್ಯೋಗಿಗಳಿಗೆ ಮಾಸಿಕ 5 ಸಾವಿರ ರೂಪಾಯಿ ನೀಡುವುದಾಗಿ ಇದೇ ಕಾಂಗ್ರೆಸ್ ಭರವಸೆ ನೀಡಿತ್ತು. ಅದೂ ಈಡೇರಿಲ್ಲ. ಇನ್ನು ಹಿಮಾಚಲ ಪ್ರದೇಶದಲ್ಲಿ ಪೆಟ್ರೋಲ್ ಉತ್ಪನ್ನಗಳ ದರಗಳನ್ನು ಇಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಅಲ್ಲಿ ದರ ಇಳಿಕೆ ಬದಲು ಪೆಟ್ರೋಲ್ ಲೀಟರ್ ಗೆ 3 ರೂ. ಏರಿಕೆಯಾಗಿದೆ.
ಹೀಗೆ ಚುನಾವಣೆ ವೇಳೆ ಪೊಳ್ಳು ಭರವಸೆಗಳನ್ನು ನೀಡಿ, ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೇರುವ ಆಸೆ ಕಾಂಗ್ರೆಸ್ ಹೊಂದಿದೆ. ಆದರೆ, ಕರ್ನಾಟಕದ ಜನತೆಗೆ ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾವಂತರಿರುವ ಬೆಂಗಳೂರು ಜನತೆಗೆ ಇದೆಲ್ಲದರ ಬಗ್ಗೆ ಅರಿವಿದೆ ಎಂದು ಹೇಳಿದರು. ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಬ್- ಕ- ಸಾತ್, ಸಬ್-ಕ-ವಿಶ್ವಾಸ್, ಸಬ್-ಕ- ವಿಕಾಸ್ ಮೇಲೆ ವಿಶ್ವಾಸವಿಟ್ಟು ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ರಾಹುಲ್ ಗಾಂಧಿ ಜನಿಸಿದಾಗಿನಿಂದ ಅಂದರೆ 52 ವರ್ಷಗಳಿಂದ ಕಾಂಗ್ರೆಸ್ ಎಷ್ಟು ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂಬುದನ್ನು ಅವರೇ ಹೇಳಬೇಕು ಎಂದು ಪ್ರಶ್ನಿಸಿದರು.ಈ ಅವಧಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ವಿರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಅವಧಿಗೆ ಮುನ್ನವೇ ಕೆಳಗಿಳಿಸಲಾಯಿತು.
ಇನ್ನು, ನಿಜಲಿಂಗಪ್ಪನವರನ್ನು ಅಂದು ಅಧಿಕಾರದಲ್ಲಿದ್ದ ಇಂದಿರಾಗಾAಧಿಯೇ ಸೋಲಿಸಿದ್ದರು. ಆದರೆ, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ನಾಲ್ವರು ಮುಖ್ಯಮಂತ್ರಿಗಳ ಪೈಕಿ ಮೂರು ಮುಖ್ಯಮಂತ್ರಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಯಾವ ಸ್ಥಾನ ನೀಡುತ್ತದೆ ಎಂಬುದನ್ನು ಆ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಬೇಕು ಎಂದು ಸುಧಾಂಶು ತ್ರಿವೇದಿ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ