ಹತ್ರಾಸ್ :
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತದಲ್ಲಿ ಸಂತ್ರಸ್ತರ ಕುಟುಂಬ ಸದಸ್ಯರನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭೇಟಿ ಮಾಡಿದರು.ಹತ್ರಾಸ್‌ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಮೊದಲು, ರಾಹುಲ್ ಗಾಂಧಿ ಅಲಿಘರ್‌ನಲ್ಲಿ ಕೆಲಹೊತ್ತು ನಿಂತು ಜಿಲ್ಲೆಯ ಸಂತ್ರಸ್ತರ ಸಂಬಂಧಿಕರನ್ನು ಭೇಟಿ ಮಾಡಿದರು.
ಇಂದು ಮುಂಜಾನೆ ದೆಹಲಿಯಿಂದ ಹತ್ರಾಸ್‌ಗೆ ರಸ್ತೆ ಮೂಲಕ ಸಾಗಿದ ರಾಹುಲ್ ಗಾಂಧಿಯವರಿಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ, ಪಕ್ಷದ ವಕ್ತಾರ ಸುಪ್ರಿಯಾ ಶ್ರೀನಾಟೆ ಮತ್ತು ಇತರ ಪದಾಧಿಕಾರಿಗಳು ಸಾಥ್ ನೀಡಿದರು.
ಕಳೆದ ಮಂಗಳವಾರ ಹತ್ರಾಸ್‌ನಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಭೋಲೆ ಅವರ ಸತ್ಸಂಗದಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು 121 ಜನರು ಸಾವಿಗೀಡಾಗಿದ್ದು, ಅವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಾರೆ.
ಅಲಿಘರ್‌ನಲ್ಲಿ ಕಾಂಗ್ರೆಸ್ ನಾಯಕ ಹತ್ರಾಸ್ ಕಾಲ್ತುಳಿತದ ಸಂತ್ರಸ್ತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅವರ ಕಷ್ಟ ಆಲಿಸಿದರು. ಅಲಿಘರ್‌ನ 17 ಜನರು ಮತ್ತು ಹತ್ರಾಸ್‌ನ 19 ಜನರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.ಕಷ್ಟದಲ್ಲಿರುವವರ ನೆರವಿಗೆ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ನೆರವು ಒದಗಿಸಿಕೊಡುವ ಭರವಸೆಯನ್ನು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ನೀಡಿದರು.
ಹತ್ರಾಸ್ ದುರಂತದ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ, ಕಾಲ್ತುಳಿತದ ಹಿಂದೆ ಪಿತೂರಿ ಇರುವ ಸಾಧ್ಯತೆಯಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
121 ಜನರ ಸಾವಿಗೆ ಕಾರಣವಾದ ಹತ್ರಾಸ್ ಕಾಲ್ತುಳಿತ ಘಟನೆಯಲ್ಲಿ ಆಡಳಿತದ ಕಡೆಯಿಂದ ಲೋಪಗಳಾಗಿವೆ ಎಂದು ಸಂತ್ರಸ್ತರನ್ನು ಭೇಟಿ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಈ ಘಟನೆಯನ್ನು ರಾಜಕೀಯವಾಗಿ ನೋಡಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಈ ದುರ್ಘಟನೆಯ ನಂತರ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ, ಹಲವಾರು ಜನರು ಪ್ರಾಣ ಕಳೆದುಕೊಂಡಿರುವುದು ದುಃಖದ ಸಂಗತಿಯಾಗಿದೆ, ನಾನು ರಾಜಕೀಯ ಮಾತನಾಡಲು ಬಯಸುವುದಿಲ್ಲ. ಸ್ಥಳೀಯ ಆಡಳಿತ ಕಡೆಯಿಂದ ವ್ಯವಸ್ಥೆಯಲ್ಲಿ ಲೋಪವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.