ನವದೆಹಲಿ:
ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಎಂದಿನಂತೆ ಮಹಾಭಾರತ, ದೇವರುಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದಾರೆ.
ಭಾರತ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಸಂಸತ್ ನಲ್ಲಿ ಸಂವಿಧಾನದ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಕುರಿತು ಭಾಷಣ ಮಾಡಿರುವ ರಾಹುಲ್ ಗಾಂಧಿ ಬಿಜೆಪಿ ಮನುಸ್ಮೃತಿಯನ್ನು ಸಂವಿಧಾನಕ್ಕಿಂತ ಉನ್ನತ ಸ್ಥಾಯಿಯಲ್ಲಿ ಪರಿಗಣಿಸುತ್ತದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಯುವಕರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂಬ ಅಂಶವನ್ನು ಟೀಕಿಸಲು ಮಹಾಭಾರತವನ್ನು ಉಲ್ಲೇಖಿಸಿದ್ದಾರೆ. ” ಮಹಾಭಾರತದಲ್ಲೂ ಜಾತಿ ಪದ್ಧತಿ ಇತ್ತು, ದ್ರೋಣಾಚಾರ್ಯ ಗುರು ದಕ್ಷಿಣೆಗಾಗಿ ಏಕಲವ್ಯನ ಬೆರಳು ಕತ್ತರಿಸಿದಂತೆಯೇ ಈಗ ಕೇಂದ್ರ ಸರ್ಕಾರ ದೇಶದ ಯುವಕರ ಹೆಬ್ಬೆರಳನ್ನು ಕತ್ತರಿಸುತ್ತಿದೆ, ಎಲ್ಲವನ್ನೂ ಅದಾನಿ ಹಾಗೂ ಇನ್ನಿತರ ಕೈಗಾರಿಕೋದ್ಯಮಿಗಳ ಕೈಲಿ ಇಡುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹಾಭಾರತದಲ್ಲಿ ಏಕಲವ್ಯ ಎಂಬ ತಪಸ್ವಿ ಯುವಕನಿದ್ದ. ಮುಂಜಾನೆ ಎದ್ದು, ಬಿಲ್ಲು ಬಾಣ ಹಿಡಿದು ಅಭ್ಯಾಸ ಮಾಡುತ್ತಿದ್ದ. ತಪಸ್ಸು ಎಂದರೆ ದೇಹವನ್ನು ಬಿಸಿಯಾಗಿಸುವುದು ಎಂದರ್ಥ ಎಂದು ರಾಹುಲ್ ಗಾಂಧಿ ಹೇಳಿದಾಗ, ಸದನದ ಸದಸ್ಯರು ನಗುವ ದೃಶ್ಯ ದಾಖಲಾಗಿದೆ.
“ದ್ರೋಣಾಚಾರ್ಯರು ಏಕಲವ್ಯನ ಬೆರಳುಗಳನ್ನು ಕತ್ತರಿಸಿದಂತೆಯೇ, ನೀವು (ಸರ್ಕಾರ) ದೇಶದ ಯುವಕರ ಹೆಬ್ಬೆರಳನ್ನು ಕತ್ತರಿಸಿದ್ದೀರಿ” ಎಂದು ವಿಪಕ್ಷ ನಾಯಕ ಆರೋಪಿಸಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ಸದಸ್ಯರು ವಿಪಕ್ಷ ನಾಯಕರು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಸಂವಿಧಾನವನ್ನು ಉನ್ನತ ಎಂದು ಭಾವಿಸುವುದಿಲ್ಲ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಸಾವರ್ಕರ್ ಅವರು ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂದು ಟೀಕಿಸಿದ್ದರು. “ಮನುಸ್ಮೃತಿ ಹಿಂದೂ ರಾಷ್ಟ್ರಕ್ಕೆ ವೇದಗಳ ನಂತರ ಹೆಚ್ಚು ಪೂಜಿಸಬಹುದಾದ ಗ್ರಂಥವಾಗಿದೆ ಮತ್ತು ಪ್ರಾಚೀನ ಕಾಲದ ಸಂಸ್ಕೃತಿ, ಪದ್ಧತಿಗಳು, ಚಿಂತನೆ ಮತ್ತು ಆಚರಣೆಗೆ ಆಧಾರವಾಗಿದೆ. ಈ ಪುಸ್ತಕ ಶತಮಾನಗಳಿಂದ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ದೈವಿಕ ಉನ್ನತಿಯನ್ನು ಕ್ರೋಡೀಕರಿಸಿದೆ. ಇಂದು ಮನುಸ್ಮೃತಿಯೇ ಕಾನೂನಾಗಿದೆ.” ಇದು ಸಾವರ್ಕರ್ ಅವರ ಮಾತುಗಳು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಾವರ್ಕರ್ ಅವರ ಉದ್ದೇಶಿತ ಉಲ್ಲೇಖಗಳನ್ನು ಪಕ್ಷದ ನಾಯಕರು ಒಪ್ಪುತ್ತಾರೆಯೇ ಎಂದು ರಾಹುಲ್ ಗಾಂಧಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ನೀವು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಾಗ, ನೀವು ಸಾವರ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದೀರಿ, ನೀವು ಸಾವರ್ಕರ್ ಅವರನ್ನು ನಿಂದಿಸುತ್ತಿದ್ದೀರಿ, ನೀವು ಸಾವರ್ಕರ್ ಅವರನ್ನು ಮಾನಹಾನಿ ಮಾಡುತ್ತಿದ್ದೀರಿ ಎಂದು ಅವರು ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.