ನವದೆಹಲಿ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದು, ಪ್ರಧಾನಿ ಹೇಳುತ್ತಿರುವುದನ್ನು ಓರ್ವ ಸಾಮಾನ್ಯ ವ್ಯಕ್ತಿ ಹೇಳಿದ್ದರೆ, ಆತನನ್ನು ನೀವು ಸೀದಾ ಮನೋರೋಗ ಚಿಕಿತ್ಸೆಗೆ ಕರೆದೊಯ್ಯುತ್ತೀರ ಎಂದು ಹೇಳಿದ್ದಾರೆ.
ತನ್ನನ್ನು ದೇವರು ಕಳುಹಿಸಿದ್ದಾನೆಂಬ ಪ್ರಧಾನಿ ಮೋದಿ ಪ್ರತಿಪಾದನೆಯನ್ನೂ ಟೀಕಿಸಿರುವ ರಾಹುಲ್ ಗಾಂಧಿ, ಮೋದಿ 22 ಮಂದಿಗಾಗಿ ಕೆಲಸ ಮಾಡುತ್ತಿದ್ದಾರೆ, ಬಡವರಿಗಾಗಿ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇತ್ತೀಚಿಗೆ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ನಾನು ಕೇವಲ ಹುಟ್ಟಿಲ್ಲ, ದೇವರು ಆತನ ಕೆಲಸ ಮಾಡುವುದಕ್ಕಾಗಿ ನನ್ನನ್ನು ಕಳಿಸಿರುವುದರಿಂದ ಇಷ್ಟು ಶಕ್ತಿ ತಮಗೆ ಸಿಗುತ್ತಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ದೇವರಿಂದ ಕಳಿಸಲ್ಪಟ್ಟ ವ್ಯಕ್ತಿ ಕೇವಲ 22 ಜನರಿಗಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ವಿಚಿತ್ರ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅಂಬಾನಿ, ಅದಾನಿ ಇಚ್ಛೆಯ ಪ್ರಕಾರ ಎಲ್ಲವನ್ನೂ ಮಾಡುತ್ತಾರೆ. ರೈಲ್ವೆ ನಿಲ್ದಾಣ, ಬಂದರು, ವಿಮಾನ ನಿಲ್ದಾಣ ಸೇರಿದಂತೆ ದೇಶದ ಎಲ್ಲಾ ಆಸ್ತಿಗಳನ್ನೂ ಅದಾನಿಗೆ ಕೊಡುತ್ತಾರೆ. ಆದರೆ ಬಡವರು ಸಾಲ ಮನ್ನ ಮಾಡಲು ಕೋರಿದರೆ, ರಸ್ತೆ, ಆಸ್ಪತ್ರೆ, ಶಿಕ್ಷಣವನ್ನು ಕೇಳಿದರೆ, ಮೋದಿ ಏನನ್ನೂ ಮಾಡುವುದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪಕ್ಷದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರನ್ನು ಬೆಂಬಲಿಸಿ ಈಶಾನ್ಯ ದೆಹಲಿಯ ದಿಲ್ಶಾದ್ ಗಾರ್ಡನ್‌ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಯಾವಾಗಲೂ ಸಂವಿಧಾನವನ್ನು ಬದಲಾಯಿಸಲು ಬಯಸುತ್ತದೆ ಎಂದು ಪ್ರತಿಪಾದಿಸಿದ್ದು, ಈ ಚುನಾವಣೆ ಸಂವಿಧಾನದ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ ಎಂದಿದ್ದಾರೆ.