ರಾಯಚೂರು
ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಹೇಯ ಕೃತ್ಯ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಸದ್ಯ ಸಂತ್ರಸ್ತೆ ಬಾಲಕಿಯನ್ನು ಮಾನ್ವಿ ತಾಲೂಕು ಆಸ್ಪತ್ರೆಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ಸದ್ಯ ಪ್ರಕರಣ ಸಂಬಂಧ ಅತ್ಯಾಚಾರ ಆರೋಪಿ ಶಿವನಗೌಡ ಹಾಗೂ ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಶಾಲೆಯಿಂದ ಮನೆಗೆ ಕರೆದೊಯ್ಯುವ ನೆಪಮಾಡಿ ಆರೋಪಿ ಶಿವನಗೌಡ ಬಾಲಕಿಯನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪೋಷಕರ ಅನುಮತಿಯಿಲ್ಲದೆ ಅಪರಿಚಿತರೊಂದಿಗೆ ಮಗುವನ್ನು ಕಳುಹಿಸಿದ ಶಾಲಾ ಸಿಬ್ಬಂದಿ ವಿರುದ್ಧ ಸಂತ್ರಸ್ತೆ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅತ್ಯಾಚಾರ ಎಸಗಿದಾತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಬೇರೆ ಯಾವ ಮಕ್ಕಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.
ಬಾಲಕಿಯ ತಂದೆ-ತಾಯಿ ಆಕೆಯನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಆರೋಪಿ ಶಾಲಾ ಸಿಬ್ಬಂದಿ ಬಳಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ‘‘ಅಮ್ಮ ಅಪ್ಪನ ಬಳಿ ಕರೆದುಕೊಂಡು ಹೋಗುತ್ತೇನೆ ಬಾ’’ ಎಂದು ಮಗಳನ್ನು ಬಸ್ಸು ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.
ಇಷ್ಟು ಚಿಕ್ಕ ಬಾಲಕಿಯ ಮೇಲೆಯೇ ಇಂಥ ಕೃತ್ಯ ಎಸಗಿದವನು ಮುಂದೆ ಬೇರೆ ಹುಡುಗಿಯರು, ಯುವತಿರ ಮೇಲೆಯೂ ಅತ್ಯಾಚಾರ ಎಸಗಲಾರ ಎಂಬುದಕ್ಕೆ ಏನು ಖಾತರಿ ಇದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಗಳು ಎಂದಿನಂತೆಯೇ ಬೆಳಗ್ಗೆ ಶಾಲಾ ವಾಹನದಲ್ಲಿ ತೆರಳಿದ್ದಳು. ಮಧ್ಯಾಹ್ನ 3 ರ ನಂತರ ಶಾಲೆಯಿಂದ ವಾಪಸ್ ಕಳುಹಿಸುತ್ತಾರೆ. 3:30ರ ಸುಮಾರಿಗೆ ಶಾಲೆ ಬಳಿ ತರಳಿದ್ದ ಆರೋಪಿ, ಅಪ್ಪ ಅಮ್ಮನ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಬಾಲಕಿಯನ್ನು ಬಸ್ ಸ್ಟ್ಯಾಂಡ್ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅತ್ಯಾಚಾರ ಮಾಡಿದ್ದಾನೆ. ಈ ವಿಷಯವನ್ನು ತಂದೆ ತಾಯಿಯ ಬಳಿ ಹೇಳಿದರೆ ನಿನ್ನನ್ನು ಹೊಡೆದುಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ನನ್ನ ಮಗಳಿಗೆ ಆದ ಪರಿಸ್ಥಿತಿ ಕರ್ನಾಟಕದ ಯಾವ ಬಾಲಕಿಗೂ ಆಗಬಾರದು ಎಂದು ಅವರು ಹೇಳಿದ್ದಾರೆ.