ಗುಜರಾತ್:
ಗುಜರಾತ್ ನ ಭರೂಚ್ ನಲ್ಲಿ ಖಾಸಗಿ ಕಂಪನಿಯಲ್ಲಿ ಖಾಲಿ ಇದ್ದ 10 ಉದ್ಯೋಗಗಳಿಗೆ 1,800 ಆಕಾಂಕ್ಷಿಗಳು ಬಂದಿದ್ದ ಪರಿಣಾಮ ಜನ ದಟ್ಟಣೆ ತೀವ್ರಗೊಂಡು ಕಟ್ಟಡದಲ್ಲಿದ್ದ ಸ್ಟೀಲ್ ರೇಲಿಂಗ್ ಕುಸಿದಿದೆ.
ರೇಲಿಂಗ್ ಕುಸಿಯುತ್ತಿದ್ದಾಂತೆಯೇ ಹಲವರು ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಘಟನೆಯ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದೆ. ಅಷ್ಟೇ ಅಲ್ಲದೇ ಗುಜರಾತ್ ಮಾಡಲ್ ನ ವೈಫಲ್ಯ ಇದಾಗಿದೆ ಎಂದು ಹೇಳಿದೆ. ಇತ್ತ ಆಡಳಿತಾರೂಢ ಬಿಜೆಪಿ ಸಂಸದ ಘಟನೆಗೆ ಕಂಪನಿಯನ್ನು ಹೊಣೆಯನ್ನಾಗಿ ಮಾಡಿದ್ದಾರೆ.
ರೇಲಿಂಗ್ ಕುಸಿದು, ಜನರು ಆಯ ತಪ್ಪಿ ಬೀಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ನೂರಕ್ಕೂ ಹೆಚ್ಚು ಜನರು ಸಂದರ್ಶನಗಳು ನಡೆಯುತ್ತಿದ್ದ ಹೊಟೇಲ್‌ನ ಪ್ರವೇಶದ್ವಾರಕ್ಕೆ ಎರಡೂ ಕಡೆಯಿಂದ ಎರಡು ಮೆಟ್ಟಿಲುಗಳ ಮೂಲಕ ನುಗ್ಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ರೇಲಿಂಗ್ ಕುಸಿತವನ್ನು ಕಂಡ ಇಬ್ಬರು ಆಕಾಂಕ್ಷಿಗಳು ಕೆಳಗೆ ಜಿಗಿಯುತ್ತಾರೆ, ಆದರೆ ಕನಿಷ್ಠ ಆರು ಮಂದಿ ರೇಲಿಂಗ್‌ನೊಂದಿಗೆ ಬೀಳುತ್ತಿರುವುದನ್ನು ವೀಡಿಯೊಗಳು ತೋರಿಸುತ್ತವೆ. ಆದಾಗ್ಯೂ, ರೇಲಿಂಗ್ ನೆಲದಿಂದ ಸ್ವಲ್ಪ ದೂರದಲ್ಲಿದ್ದ ಕಾರಣ ಅವರಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ.
ಗುಜರಾತ್ ನ ಜಗಾಡಿಯಾದಲ್ಲಿ ಕೈಗಾರಿಕಾ ಅಭಿವೃದ್ಧಿ ನಿಗಮ ಸಂಕೀರ್ಣದಲ್ಲಿದ್ದ ಇಂಜಿನಿಯರಿಂಗ್ ಕಂಪನಿ 10 ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿತ್ತು.
