ಬೆಂಗಳೂರು:
ರಾಜ್ಯದ ಹಲವೆಡೆ ಕಳೆದ ವಾರ ಒಂದೆರಡು ಮೂರು ದಿನಗಳ ಕಾಲ ಮಳೆರಾಯ ಕರುಣೆ ತೋರಿದ್ದು, ಇದೀಗ ಮತ್ತೇ ಅದೇ ಆಡಿದ್ದ ಆಟ ಎಂಬಂತೆ ಮಳೆರಾಯ ಮುಸಿನಿಕೊಂಡಿದ್ದಾನೆ. ಅಲ್ಲದೆ ಇದೀಗ ಮತ್ತೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಇದರ ನಡುವೆಯೂ ಇದೇ ಏಪ್ರಿಲ್ 18 ಮತ್ತು 19ರಂದು ಮಳೆರಾಯ ತಂಪೆರೆಯಲಿದ್ದಾನೆ ಎನ್ನುವ ಮುನ್ಸೂಚನೆ ನೀಡಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಏಪ್ರಿಲ್ 18, 19ರಂದು ಧಾರಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆ ಈ ಎರಡು ದಿನ ಎಲ್ಲಾ 31 ಜಿಲ್ಲೆಗಳಿಗೂ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಪ್ರತಿ ಗಾಳಿಯ ವೇಗವು ಗಂಟೆಗೆ 30-40 ಕಿಲೋ ಮೀಟರ್ ಬೀಸುವ ಸಾಧ್ಯತೆಯಿದೆ ಅಂತಲೂ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಇನ್ನು ಕಳೆದ ವಾರ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳ ಹಲವೆಡೆ ಭಾರೀ ಮಳೆ ಸುರಿದಿತ್ತು. ಬಳಿಕ ಅದೇ ಆಡಿದ್ದೇ ಆಟ ಎಂಬಂತೆ ಸೂರ್ಯನ ಶಾಖದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಇದೀಗ ಈ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ ಅಂತಲೂ ಐಎಂಡಿ ಸಿಹಿಸುದ್ದಿ ನೀಡಿದೆ.
ಅಷ್ಟೇ ಅಲ್ಲದೆ ಮಂಗಳವಾರ (ಏಪ್ರಿಲ್ 16) ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ. ಇನ್ನು ಮತ್ತೊಂದೆಡೆ ಉತ್ತರ ಒಳನಾಡು ಹಾಗೂ ಮಲೆನಾಡುವ ಭಾಗದ ಹಲವು ಭಾಗಗಲ್ಲಿ ಬುಧವಾರ (ಏಪ್ರಿಲ್ 17) ಮಳೆರಾಯ ತಂಪೆರೆಯಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆದರೆ ಕಳೆದ ವಾರ ರಾಜ್ಯದ ಬಹುತೇಕ ಜಿಲ್ಲಿಗಳಲ್ಲಿ ಮಳೆರಾಯ ಕರುಣೆ ತೋರಿದ್ದು, ಬೆಂಗಳೂರು, ಚಾಮರಾಜನಗರದಲ್ಲಿ ಮಾತ್ರ ಬಿಸಿಲಿನ ವಾತವಾರಣ ಮುಂದುವರೆದಿದೆ. ಹಾಗೆಯೇ ಇನ್ನು ಮುಂದಿನ ಒಂದು ವಾರವೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದ್ದು, ಬಳಿಕ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ರವಾನಿಸಿದೆ.
ಇನ್ನು ಮುಂದಿನ ಎರಡು ದಿನಗಳ ಕಾಲ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ. ರಾಜ್ಯದ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಅತೀ ಗರಿಷ್ಠ ಉಷ್ಣಾಂಶ 39.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ