ಲಖನೌ:
ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ ಎರಡು ರೈಲುಗಳನ್ನು ಹಳಿ ತಪ್ಪಿಸಲು ಪ್ರಯತ್ನಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಲೋಕೋ ಪೈಲಟ್‌ಗಳ ಜಾಗರೂಕತೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಅಧಿಕಾರಿಗಳ ಪ್ರಕಾರ, ಸೋಮವಾರ ಸಂಜೆ ದಲೇಲ್‌ನಗರ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವೆ, 1129/14 ಕಿಲೋಮೀಟರ್ ಬಳಿ ಈ ಘಟನೆಗಳು ಸಂಭವಿಸಿವೆ. ಅಪರಿಚಿತ ವ್ಯಕ್ತಿಗಳು ಮರದ ದಿಮ್ಮಿಗಳನ್ನು ರೈಲ್ವೆ ಹಳಿಗಳಿಗೆ ಅರ್ಥಿಂಗ್ ವೈರ್ ಬಳಸಿ ಕಟ್ಟಿ, ಹಾದುಹೋಗುವ ರೈಲುಗಳಿಗೆ ಗಂಭೀರ ಅಪಾಯವನ್ನುಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದೆಹಲಿಯಿಂದ ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿದ್ದ 20504 ರಾಜಧಾನಿ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಮೊದಲ ಅಡಚಣೆಯನ್ನು ಗಮನಿಸಿದರು. ತ್ವರಿತವಾಗಿ ಕಾರ್ಯನಿರ್ವಹಿಸಿದ ಚಾಲಕ ತುರ್ತು ಬ್ರೇಕ್‌ಗಳನ್ನು ಹಾಕಿ, ರೈಲನ್ನು ನಿಲ್ಲಿಸಿ, ಮರದ ದಿಮ್ಮಿಗಳನ್ನು ತೆಗೆದು ಹಾಕಿದ್ದಾರೆ. ಸ್ವಲ್ಪ ಸಮಯದ ನಂತರ ಮತ್ತೆ ಅದೇ ಹಳಿಯಲ್ಲಿ 15044 ಕಥ್ಗೊಡಮ್ ಎಕ್ಸ್‌ಪ್ರೆಸ್ ಅನ್ನು ಹಳಿತಪ್ಪಿಸಲು ಇದೇ ರೀತಿಯ ಪ್ರಯತ್ನ ಮಾಡಲಾಯಿತು. ಈ ಘಟನೆಯನ್ನೂ ವಿಫಲಗೊಳಿಸಲಾಯಿತು. ಲೋಕೋ ಪೈಲಟ್‌ನ ಅರಿವಿನಿಂದಾಗಿ ಭಾರೀ ಅನಾಹುತ ತಪ್ಪಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ ಸ್ಥಳಕ್ಕೆ ಸೂಪರಿಂಟೆಂಡೆಂಟ್ ನೀರಜ್ ಕುಮಾರ್ ಜದೌನ್ ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡಿದರು. ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ), ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ತಿಳಿಸಿದ್ದಾರೆ. ದಲೇಲ್‌ನಗರ ಮತ್ತು ಉಮ್ರತಾಲಿ ರೈಲು ನಿಲ್ದಾಣಗಳ ನಡುವಿನ ಕಚೌನಾ ಪೊಲೀಸ್ ಠಾಣೆಯಲ್ಲಿ ರೈಲು ಹಳಿಯಲ್ಲಿ (ಸ್ತಂಭ ಸಂಖ್ಯೆ 1129/14) ಮರದ ತುಂಡು ಬಿದ್ದಿರುವ ಬಗ್ಗೆ ಮಾಹಿತಿ ಬಂದಿತು.
ಮಾಹಿತಿ ಬಂದ ತಕ್ಷಣ, ಜಿಆರ್‌ಪಿ ಮತ್ತು ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಪರಿಶೀಲಿಸಿದರು. ತನಿಖೆಯಲ್ಲಿ, ಮರದ ತುಂಡನ್ನು ಕಬ್ಬಿಣದ ಪಟ್ಟಿಗೆ ಕಟ್ಟಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಘಟನೆಯ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಇತರ ಅಗತ್ಯ ಕ್ರಮಗಳು ನಡೆಯುತ್ತಿವೆ” ಎಂದು ಹಾರ್ಡೋಯ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಔಂಕಾ ಗ್ರಾಮದ ಬಕ್ಷಾ ಪೊಲೀಸ್ ಠಾಣೆ ಬಳಿ ರೈಲ್ವೆ ಹಳಿಯ ಮೇಲೆ ಉಕ್ಕಿನ ಡ್ರಮ್ ಇರಿಸಿ ರೈಲು ಹಳಿತಪ್ಪಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಜೌನ್‌ಪುರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು.
