ಬಾಬ್ರಿ ಮಸೀದಿ ನಿರ್ಮಾಣಕ್ಕೆ ಜನರ ಹಣ ಬಳಸಲು ನೆಹರು ಯೋಚಿಸಿದ್ರು ; ರಾಜನಾಥ್‌ ಸಿಂಗ್‌ ಗಂಭೀರ ಆರೋಪ

ಅಹಮದಾಬಾದ್‌: 

    ಮಾಜಿ ಪ್ರಧಾನಿ ಜವಹಾರ್‌ಲಾಲ್‌ ನೆಹರು  ಅವರು ಬಾಬ್ರಿ ಮಸೀದಿ ನಿರ್ಮಿಸಲು ಸಾರ್ವಜನಿಕವಾಗಿ ಹಣವಸೂಲಿ ಮಾಡಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌  ಹೊಸದೊಂದು ಬಾಂಬ್‌ ಸಿಡಿಸಿದ್ದಾರೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನೆಹರು ಅವರು ಈ ಕ್ರಮವನ್ನು ವಿರೋಧಿಸಿ ತಡೆದರು ಎಂದು ಅವರು ಹೇಳಿದರು. ಗುಜರಾತ್‌ನಲ್ಲಿ ನಡೆದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ 150ನೇ ಜನ್ಮದಿನಾಚರಣೆಯ ಸ್ಮರಣಾರ್ಥವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಏಕತಾ ಮೆರವಣಿಗೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಈ ಕುರಿತು ಮಾತನಾಡಿದ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, “ಪಂಡಿತ್ ಜವಾಹರಲಾಲ್ ನೆಹರು ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಬಾಬ್ರಿ ಮಸೀದಿ ನಿರ್ಮಿಸಲು ಬಯಸಿದ್ದರು. ಈ ಪ್ರಸ್ತಾಪವನ್ನು ಯಾರಾದರೂ ವಿರೋಧಿಸಿದರೆ, ಅದು ಗುಜರಾತಿ ತಾಯಿಗೆ ಜನಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್. ಅವರು ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಬಾಬರಿ ಮಸೀದಿಯನ್ನು ನಿರ್ಮಿಸಲು ಅನುಮತಿಸಲಿಲ್ಲ” ಎಂದು ಹೇಳಿದರು.

   ಗುಜರಾತ್‌ನ ಸೋಮನಾಥ್‌ ದೇವಾಲಯದ ಪುನಃಸ್ಥಾಪನೆಯ ವಿಷಯವನ್ನು ನೆಹರು ಪ್ರಸ್ತಾಪ ಮಾಡಿದಾಗ ದೇವಾಲಯ ನವೀಕರಣಕ್ಕೆ ಬೇಕಾದ 30 ಲಕ್ಷ ಮೊತ್ತವನ್ನು ಸಾರ್ವಜನಿಕರು ದೇಣಿಗೆ ನೀಡಿದ್ದನ್ನು ಸ್ಮರಿಸಿದ ಅವರು, “ಒಂದು ಟ್ರಸ್ಟ್ ಅನ್ನು ಸ್ಥಾಪಿಸಲಾಗಿತ್ತು, ಮತ್ತು ಸರ್ಕಾರದ ಹಣದಲ್ಲಿ ಒಂದು ಪೈಸೆಯನ್ನೂ ಈ (ಸೋಮನಾಥ ದೇವಾಲಯ) ಕೆಲಸಕ್ಕಾಗಿ ಖರ್ಚು ಮಾಡಲಾಗಿಲ್ಲ. ಅದೇ ರೀತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಒಂದೇ ಒಂದು ರೂಪಾಯಿ ನೀಡಲಿಲ್ಲ. ಸಂಪೂರ್ಣ ವೆಚ್ಚವನ್ನು ದೇಶದ ಜನರು ಭರಿಸಿದ್ದಾರೆ. ಇದನ್ನು ನಿಜವಾದ ಜಾತ್ಯತೀತತೆ ಎಂದು ಕರೆಯಲಾಗುತ್ತದೆ” ಎಂದು ಹೇಳಿದರು.

    ಮುಂದುವರೆದು ಮಾತನಾಡಿದ ಅವರು, 1946ರಲ್ಲಿ ನಡೆದ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ದಾರ್‌ ಪಟೇಲ್‌ ಅವರು ಕೂಡ ನಾಮಪತ್ರ ಸಲ್ಲಿಸಿದ್ದರು. ಮಹಾತ್ಮ ಗಾಂಧಿಯವರ ಸಲಹೆಯ ಮೇರೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡ ನಂತರ 1946 ರಲ್ಲಿ ಜವಾಹರಲಾಲ್ ನೆಹರು ಕಾಂಗ್ರೆಸ್ ಅಧ್ಯಕ್ಷರಾದರು ಎಂದು ರಾಜನಾಥ್ ಸಿಂಗ್ ಆರೋಪಿಸಿದರು. 

    ಈ ಬಗ್ಗೆ ಮಾತನಾಡಿದ ರಾಜನಾಥ್‌ ಸಿಂಗ್‌, “1946 ರಲ್ಲಿ, ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿತ್ತು. ಸಮಿತಿಯ ಬಹುತೇಕ ಸದಸ್ಯರು ಪಟೇಲ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ನೆಹರೂ ಅವರನ್ನು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಮತ್ತು ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡುವಂತೆ ಗಾಂಧೀಜಿ ಕೇಳಿದಾಗ, ಅವರು ತಕ್ಷಣವೇ ಹಿಂತೆಗೆದುಕೊಂಡರು” ಎಂದು ಸಿಂಗ್ ಹೇಳಿದರು.

    ವೇದಿಕೆಯ ಭಾಣಣದಲ್ಲಿ ಯಾರ ಹೆಸರನ್ನು ಪ್ರಸ್ತಾಪ ಮಾಡದೆ, ಕೆಲವು ರಾಜಕೀಯ ಶಕ್ತಿಗಳು ಪಟೇಲ್‌ ಅವರ ಪರಂಪರೆಯನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಪಟೇಲದದ ಅವರ ಪರಂಪರೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

Recent Articles

spot_img

Related Stories

Share via
Copy link