ಜೈಪುರ:
ವೈದ್ಯರ ನಿರ್ಲಕ್ಷ್ಯದಿಂದ ರಾಜಸ್ಥಾನದ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಜೋಧ್‌ಪುರದಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದ ಪ್ರಿಯಾಂಕಾ ಬಿಷ್ಣೋಯ್ (33) ಅವರು ಜೋಧ್‌ಪುರದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಹಮದಾಬಾದ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
2016 ರ ಬ್ಯಾಚ್ ರಾಜಸ್ಥಾನ ಆಡಳಿತ ಸೇವೆಗಳ ಅಧಿಕಾರಿ ಜೋಧ್‍ಪುರದ ವಸುಂಧರಾ ಆಸ್ಪತ್ರೆಯಲ್ಲಿ ಈ ತಿಂಗಳ ಆರಂಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಅರಿವಳಿಕೆ ನೀಡಿದ ನಂತರ ಕೋಮಾಗೆ ಹೋಗಿದ್ದರು ಎಂದು ಕುಟುಂಬ ಆರೋಪಿಸಿದೆ.
ಬಿಷ್ಣೋಯ್ ಸಮುದಾಯದ ಮುಖಂಡ ದೇವೇಂದ್ರ ಬುಡಿಯಾ ಅವರು ಅಧಿಕಾರಿಯ ಸಾವಿನ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಕುಟುಂಬಸ್ಥರು ಸಹ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜೋಧಪುರ ಜಿಲ್ಲಾಧಿಕಾರಿ ಗೌರವ್ ಅಗರವಾಲ್ ಅವರು ಐವರು ಅಧಿಕಾರಿಗಳ ತಂಡದಿಂದ ತನಿಖೆಗೆ ಆದೇಶಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಬಿಷ್ಣೋಯ್ ಅವರ ನಿಧನಕ್ಕೆ ತಂತಾಪ ಸೂಚಿಸಿದ್ದಾರೆ.
ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ನಡುವೆಯೇ ವಸುಂಧರಾ ಆಸ್ಪತ್ರೆಯ ನಿರ್ದೇಶಕ ಡಾ.ಸಂಜಯ್ ಮಕ್ವಾನಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಸೆಪ್ಟೆಂಬರ್ 5 ರಂದು ತನ್ನ ಶಸ್ತ್ರಚಿಕಿತ್ಸೆಯ ನಂತರ, ಸಂಜೆ ಮತ್ತು ರಾತ್ರಿಯಿಡೀ ಪ್ರಿಯಾಂಕಾ ಸ್ಥಿರವಾಗಿದ್ದರು, ಆದರೆ ಬೆಳಿಗ್ಗೆ ಅವರಿಗೆ ಸಮಸ್ಯೆ ಅನುಭವಿಸಲು ಪ್ರಾರಂಭಿಸಿದರು.
ರಕ್ತ ಪರೀಕ್ಷೆಯಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ಇರುವುದು ಕಂಡು ಬಂತು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ICU ಗೆ ವರ್ಗಾಯಿಸಲಾಯಿತು. ಇದರ ಹೊರತಾಗಿಯೂ,ಅವರಿಗೆ ಸಮಸ್ಯೆ ಮುಂದುವರೆಯಿತು. ಕಿಬ್ಬೊಟ್ಟೆಯ ಸ್ಕ್ಯಾನ್ ಮತ್ತು ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಸರಣಿ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಡಾ ಮಕ್ವಾನಾ ವಿವರಿಸಿದ್ದಾರೆ.
ಆಕೆಯ ಅಸ್ವಸ್ಥತೆಗೆ ಕಾರಣವನ್ನು ತಿಳಿಯಲು ನರವಿಜ್ಞಾನಿಗಳನ್ನು ಸಹ ಸಂಪರ್ಕಿಸಲಾಯಿತು. ಅಂತಿಮವಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬವು ಅವರನ್ನು ಅಹಮದಾಬಾದ್‌ಗೆ ವರ್ಗಾಯಿಸಲು ವಿನಂತಿಸಿತು. ಆಕೆ ಅಲ್ಲಿಗೆ ಬಂದಾಗ, CT ಸ್ಕ್ಯಾನ್ ನಡೆಸಲಾಯಿತು, ಅದರಲ್ಲಿ ಮೆದುಳಿನ ರಕ್ತಸ್ರಾವವಾಗುತ್ತಿರುವುದು ತಿಳಿದು ಬಂತು ಎಂದು ವಿವರಿಸಿದ್ದಾರೆ