ಕೋಟಾ:
ಕೋಟಾದಲ್ಲಿ ಮತ್ತೊಬ್ಬ ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವರ್ಷ ಇಲ್ಲಿ ಕೋಚಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ 7ನೇ ಪ್ರಕರಣ ಇದಾಗಿದೆ.
ಮೃತರನ್ನು 18 ವರ್ಷದ ಅಂಕುಶ್ ಮೀನಾ ಎಂದು ಗುರುತಿಸಲಾಗಿದ್ದು, ದಾದಾಬರಿ ಪ್ರದೇಶದ ಪ್ರತಾಪ್ ನಗರ ಪ್ರದೇಶದ ಪಿಜಿಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸವಾಯಿ ಮಾಧೋಪುರದ ನಿವಾಸಿಯಾಗಿರುವ ಅಂಕುಶ್ ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಪದೇ ಪದೆ ಬಾಗಿಲು ಬಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪಿಜಿ ಮಾಲೀಕರು ಬಾಗಿಲು ಒಡೆದು ನೋಡಿದಾಗ ಅಂಕುಶ್ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಯ ಹಿಂದಿನ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂಕುಶ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಎಂಬಿಎಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೋಷಕರ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಮಗೆ ಕರೆ ಬಂದಿರುವುದಾಗಿ ದಾದಾಬರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮಂಗೇಲಾಲ್ ಯಾದವ್ ದೃಢಪಡಿಸಿದ್ದು, ಅಂಕುಶ್ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಪ್ರಕಾರ, ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬೆಳಗ್ಗೆ ತನ್ನ ತಂದೆಯೊಂದಿಗೆ ಫೋನ್ನಲ್ಲಿ ಮಾತನಾಡಿದ್ದನು ಎಂದಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಅಂಕುಶ್ ಈ ಪಿಜಿಗೆ ಬಂದಿದ್ದನು. ಆತನ ಸೋದರಸಂಬಂಧಿ ಕೂಡ ಅಲ್ಲೇ ವಾಸಿಸುತ್ತಿದ್ದರು. ಈತನೇ ಮೊದಲಿಗೆ ಅಂಕುಶ್ ಬಾಗಿಲು ತೆಗೆಯುತ್ತಿಲ್ಲ ಎಂದು ಪಿಜಿ ಮಾಲೀಕರಿಗೆ ತಿಳಿಸಿದ್ದು, ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಂಕುಶ್ ಆರಂಭದಲ್ಲಿ ಹತ್ತಿರದ ಪಿಜಿಯಲ್ಲಿ ಉಳಿದುಕೊಂಡಿದ್ದ. ಪರೀಕ್ಷೆಯ ಸಮಯದಲ್ಲಿ ಶಾಂತವಾದ ಸ್ಥಳವನ್ನು ಹುಡುಕುತ್ತಿದ್ದರು. ಕೋರಿಯರ ಮೇರೆಗೆ ಅಂಕುಶ್ ಮತ್ತು ಆತನ ಸ್ನೇಹಿತರಿಗೆ ಕೊಠಡಿಯನ್ನು ಬಾಡಿಗೆಗೆ ನೀಡಲಾಗಿದೆ. ಇದು ಅಧಿಕೃತ ಪಿಜಿ ಸೆಟಪ್ನ ಭಾಗವಾಗಿಲ್ಲ ಎಂದು ಪಿಜಿ ಮಾಲೀಕರಾದ ಯೋಗೇಶ್ ಬನ್ಸಾಲ್ ಹೇಳಿದ್ದಾರೆ.
ಪ್ರಮುಖ ಕೋಚಿಂಗ್ ಹಬ್ ಆಗಿರುವ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಏರಿಕೆಯಾಗುತ್ತಿವೆ. ಅಂಕುಶ್ ಸಾವಿಗೂ ಮುನ್ನ ಈ ವರ್ಷ ಆರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು.ಜನವರಿ 21 ರಂದು ಅಸ್ಸಾಂನ ನಾಗಾಂವ್ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನು. ಅದಕ್ಕೂ ಕೆಲವೇ ಗಂಟೆಗಳ ಮೊದಲು, ನೀಟ್ಗೆ ತಯಾರಿ ನಡೆಸಲು ಕೋಟಾಕ್ಕೆ ಬಂದಿದ್ದ ಅಹಮದಾಬಾದ್ನ ಯುವತಿ ಕೂಡ ಜವಾಹರ್ ನಗರದ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್, ಮಕ್ಕಳ ಇಚ್ಛೆಗೆ ವಿರುದ್ಧವಾಗಿ ವೃತ್ತಿಯನ್ನು ಮುಂದುವರಿಸುವಂತೆ ಅವರ ಮೇಲೆ ಒತ್ತಡ ಹೇರಬೇಡಿ ಎಂದು ಪೋಷಕರನ್ನು ಒತ್ತಾಯಿಸಿದ್ದಾರೆ. 2023ರಲ್ಲಿ, ಕೋಟಾದಲ್ಲಿ ಕನಿಷ್ಠ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. 2022ರಲ್ಲಿ 17 ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು.
