ಜೈಪುರ:
ರಾಜಸ್ಥಾನದ ಭರತ್‌ಪುರದ ಬಿಜೆಪಿ ನಾಯಕನೊಬ್ಬನ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ, ಕೊಲೆ ಮತ್ತು ರಹಸ್ಯವಾಗಿ ಅಂತ್ಯಕ್ರಿಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಮೃತಪಟ್ಟ ಪ್ರಿಯಾಂಕಾ ಚೌಧರಿ, ಬಿಜೆಪಿ ಯುವ ಮೋರ್ಚಾದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಕಾಶ್ ಅವರನ್ನು ವಿವಾಹವಾಗಿದ್ದರು. ಆಕಾಶ್ ಮತ್ತು ಅವರ ಸಂಬಂಧಿಕರು ಮನೆ ತಲುಪುವ ಮೊದಲೇ ಆಕೆಯ ಕತ್ತು ಹಿಸುಕಿ ಕೊಂದು, ಮೃತದೇಹವನ್ನು ದಹನ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಅಜಯ್ ಆಕೆಯ ಕುತ್ತಿಗೆಗೆ ಬಟ್ಟೆಯನ್ನು ಬಿಗಿದು ಕತ್ತು ಹಿಸುಕಿ ಕೊಂದಿದ್ದಾನೆ. ಏನಾಯಿತು ಎಂದು ನನಗೆ ತಿಳಿದಿರಲಿಲ್ಲ. ನೆರೆಹೊರೆಯವರು ನನಗೆ ಮಾಹಿತಿ ನೀಡಿದರು. ಕರೆ ಬಂದ ತಕ್ಷಣ ನಾನು ಮನೆಗೆ ಧಾವಿಸಿದೆ. ಏನಾಯಿತು ಎಂದು ಅರ್ಥಮಾಡಿಕೊಳ್ಳುವ ವೇಳೆ ನಾವು ಆಘಾತಕ್ಕೊಳಗಾಗಿದ್ದೆವು. ಕರೆಯ ನಂತರ ನಾವು ತಕ್ಷಣ ಹೊರಟೆವು ಎಂದು ಸಂತ್ರಸ್ಥೆಯ ತಂದೆ ಓಂ ಪ್ರಕಾಶ್ ಹೇಳಿದರು.
ನಾನು ಅಲ್ಲಿಗೆ ತಲುಪಿದಾಗ, ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆಗಳು ನಡೆದಿತ್ತು. ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಸಿದ್ಧತೆ ಮಾಡುತ್ತಿದ್ದರು. ಕೂಡಲೇ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಮೃತ ಮಹಿಳೆಯ ತಂದೆ ಹೇಳಿದರು. ಮರಣೋತ್ತರ ಪರೀಕ್ಷೆಗೂ ಮುನ್ನ ಮೃತದೇಹದ ಅಂತ್ಯಸಂಸ್ಕಾರ ಮಾಡಲು ಅತ್ತೆ-ಮಾವಂದಿರು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಪಿದಾವಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಪೊಲೀಸರು ಅಲ್ಲಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಲು ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಆಗಮಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸೇವಾರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸತೀಶ್ ಚಂದ್ ಹೇಳಿದ್ದಾರೆ.
2018ರ ನವೆಂಬರ್‌ನಲ್ಲಿ ಮದುವೆಯಾದಾಗಿನಿಂದ ತಮ್ಮ ಮಗಳು ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದಾಳೆ ಎಂದು ಓಂ ಪ್ರಕಾಶ್ ಆರೋಪಿಸಿದ್ದಾರೆ. ನಾನು ಮದುವೆಗೆ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿದೆ. ಆದರೆ ಅಂದಿನಿಂದ, ಆಕಾಶ್ ಕುಟುಂಬವು ಪ್ರಿಯಾಂಕಾಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿತ್ತು. ಅವರು ಥಾರ್ ಜೀಪ್ ಬೇಡಿಕೆ ಇಟ್ಟರು. ಇದೀಗ ಪ್ರಿಯಾಂಕಾಳನ್ನು ಕೊಂದು, ಆಕೆಯ ಅತ್ತೆ-ಮಾವಂದಿರು ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿತು. ನಾವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರು ಶವವನ್ನು ವಶಕ್ಕೆ ತೆಗೆದುಕೊಂಡು ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಆಕೆಯ ತಂದೆ ಹೇಳಿದರು.
ಪ್ರಿಯಾಂಕಾ ಅವರ ಕುಟುಂಬವು ವರದಕ್ಷಿಣೆಗಾಗಿ ಆಕೆಯ ಪತಿ ಮತ್ತು ಅತ್ತೆ-ಮಾವ ಅವಳನ್ನು ಕೊಂದಿದ್ದಾರೆ ಎಂದು ಆರೋಪಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.








