ಬೆಂಗಳೂರು :
ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಮಸೂದೆ ವಿರೋಧಿಸಿ ಕಾಂಗ್ರೆಸ್ ನಿಂದ ರಾಜಭವನ ಮುತ್ತಿಗೆಗೆ ತೆರಳುತ್ತಿದ್ದಂತ ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಕಾಂಗ್ರೆಸ್ ಹಾಗೂ ಕಿಸಾನ್ ಘಟಕದಿಂದ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ರಾಜಭವನ ಮುತ್ತಿಗೆಗೆ ಕರೆ ನೀಡಲಾಗಿತ್ತು. ಮೆಜೆಸ್ಟಿಕ್ ನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಹೊರಟಂತ ಪ್ರತಿಭಟನಾ ಮೆರವಣಿಗೆ ಫ್ರೀಡಂ ಪಾರ್ಕ್ ನಲ್ಲಿ ಸಭೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದ್ದರು.
ಈ ಬಳಿಕ ರಾಜಭವನಕ್ಕೆ ಮುತ್ತಿಗೆ ಹಾಕಲು ತೆರಳಿದಂತ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಪೊಲೀಸರು ಮನವೊಲಿಸೋದಕ್ಕೆ ಮುಂದಾಗಿದ್ದರು. ಆದ್ರೇ ಪೊಲೀಸರ ಮನವೊಲಿಕೆಗೆ ಒಪ್ಪದೇ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಂತ ಕಾಂಗ್ರೆಸ್ ಮುಖಂಡರಾದಂತ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ಕಾರ್ಯಕರ್ತರು, ರೈತರನ್ನು ಪೊಲೀಸರು ಮಹಾರಾಣಿ ಕಾಲೇಜಿನ ಬಳಿಯಲ್ಲೇ ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ರಾಜಭವನ ಚಲೋ ರ್ಯಾಲಿಗೆ ಅನುಮತಿ ಇಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿಕೆ ನೀಡಿದ್ದಾರೆ . ಇಂದಿನ ರಾಜಭವನ ಚಲೋಗೆ ಯಾವುದೇ ಅನುಮತಿ ಕೊಟ್ಟಿಲ್ಲ. ಮೆಜೆಸ್ಟಿಕ್ನಿಂದ ರ್ಯಾಲಿ ಸಂಬಂಧ ಅನುಮತಿ ಕೋರಿ ಪತ್ರ ಬಂದಿದೆ. ಆದರೆ ಇನ್ನೂ ಯಾವುದೇ ಅನುಮತಿ ಕೊಟ್ಟಿಲ್ಲ. ಪರಿಶೀಲನೆ ನಡೆಸಿ ರ್ಯಾಲಿಗೆ ಮಾತ್ರ ಅನುಮತಿ ನೀಡಲಾಗುವುದು. ಕೊರೋನಾ ನಿಯಮಾವಳಿ ಪ್ರಕಾರ 200 ಕ್ಕೂ ಹೆಚ್ಚು ಜನರು ಸೇರುವ ಆಗಿಲ್ಲ. ನಿಯಮ ಉಲ್ಲಂಘನೆಯಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ರೈತರು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ