ನವದೆಹಲಿ:
ಭಾರತ-ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.ಚೀನಾ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ರಕ್ಷಣಾ ಸಚಿವರು ತಿರುಗೇಟು ನೀಡಿದ್ದಾರೆ.
“ಸೇನಾ ಮುಖ್ಯಸ್ಥರ ಹೇಳಿಕೆಗಳು ಎರಡೂ ಕಡೆಯ ಸಾಂಪ್ರದಾಯಿಕ ಗಸ್ತು ತಿರುಗುವಿಕೆಯ ಅಡಚಣೆಯನ್ನು ಮಾತ್ರ ಉಲ್ಲೇಖಿಸಿವೆ. ಆದರೆ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿ ಸುಳ್ಳು ಹೇಳುತ್ತಿರುವ ರಾಹುಲ್ ಗಾಂಧಿ ಅವರಿಗೆ ನಾಚಿಕೆಯಾಗಬೇಕು” ಎಂದು ರಾಜನಾಥ್ ಸಿಂಗ್ ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿಯವರ ಆರೋಪಗಳನ್ನು ನಿರಾಕರಿಸಿದ ರಕ್ಷಣಾ ಸಚಿವರು, ಚೀನಾ ಸೈನಿಕರು ಆಗಾಗ ಗಡಿಯಲ್ಲಿ ಭಾರತೀಯ ಸೈನಿಕರ ಗಸ್ತು ತಿರುಗುವಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಲೇ ಇರುತ್ತಾರೆ. ಆದರೆ ಸೇನಾ ಮುಖ್ಯಸ್ಥರು ಎಲ್ಲಿಯೂ ಭಾರತದ ಭೂಪ್ರದೇಶವನ್ನು ಚೀನೀ ಪಡೆಗಳು ಅತಿಕ್ರಮಣ ಮಾಡಿವೆ ಎಂದು ಹೇಳಿಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೇನಾ ಮುಖ್ಯಸ್ಥರು ಚೀನಾ ಅತಿಕ್ರಮಣದ ಬಗ್ಗೆ ಮಾತನಾಡಿಲ್ಲ. “ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ತೀವ್ರ ವಿಷಾದನೀಯ. ಗಡಿಯಲ್ಲಿ ಭಾರತೀಯ ಸೈನಿಕರ ಗಸ್ತು ತಿರುಗುವಿಕೆ ಪ್ರಕ್ರಿಯೆಗೆ ಚೀನಾ ಸೈನಿಕರು ಅಡ್ಡಿಪಡಿಸುವ ಕುರಿತು, ರಕ್ಷಣಾ ಇಲಾಖೆ ಈಗಾಗಲೇ ಸಂಸತ್ತಿಗೆ ಮಾಹಿತಿ ನೀಡಿದೆ. ಆದರೆ ರಾಹುಲ್ ಗಾಂಧಿ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ತಿರುಚಿ ಕೀಳು ರಾಜಕೀಯ ಮಾಡುತ್ತಿದ್ದಾರೆ..” ಎಂದು ರಕ್ಷಣಾ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ರಾಹಲ್ ಗಾಂಧಿ, ಚೀನೀ ಸೈನಿಕರು ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿದ್ದಾರೆ ಎಂದು ಖುದ್ದು ಸೇನಾ ಮುಖ್ಯಸ್ಥರೇ ಒಪ್ಪಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಈ ವಿಷಯದಲ್ಲಿ ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದರು.