ರಜೌರಿ,ಪೂಂಚ್‌ ನಲ್ಲಿ ಇಂಟರ್‌ ನೆಟ್‌ ಸೇವೆ ಸ್ಥಗಿತ….!

ಶ್ರೀನಗರ:

    ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನಾಪಡೆ ಕಾರ್ಯಾಚರಣೆ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ರಜೌರಿ ಹಾಗೂ ಪೂಂಚ್ ನಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

   ಸೇನಾ ವಾಹನಗಳ ಮೇಲೆ ದಾಳಿ ನಡೆಸಿ, ಐವರು ಸೈನಿಕರನ್ನು ಬಲಿಪಡೆದುಕೊಂಡಿದ್ದ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಅವಳಿ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಅಮಾನತುಗೊಳಿಸಲಾಗಿದ್ದು, ಈ ನಡುವಲ್ಲೇ ಯೋಧರ ಸಾವಿನ ತನಿಖೆಗಾಗಿ ಕೆಲ ಶಂಕಿತರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಅಧಿಕಾರಿಗಳು ಶಂಕಿತರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎನ್ನಲಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ವ್ಯಾಪಕ ಅಸಮಾಧಾನಗಳು ವ್ಯಕ್ತವಾಗತೊಡಗಿದೆ.

   ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವೇಳೆ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೂಂಚ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸೇನೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಮತ್ತು ಸಿವಿಲ್ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಮೂರರಿಂದ ನಾಲ್ಕು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಗುರುವಾರ ಮಧ್ಯಾಹ್ನ ಪೂಂಚ್‌ನ ಸುರನ್‌ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಡೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‌ನಲ್ಲಿ ಸೇನೆಯ ಎರಡು ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ ಐವರು ಯೋಧರು ಹುತಾತ್ಮರಾಗಿ, ಇಬ್ಬರು ಗಾಯಗೊಂಡಿದ್ದರು.

   ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಸ್ಥಳವನ್ನು ಸುತ್ತುವರೆದಿದ್ದ ಭದ್ರತಾ ಪಡೆಗಳು, ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಈವರೆಗೂ ಉಗ್ರರಾಗಲಿ ಅವರ ಕುರಿತ ಸುಳಿವಾಗಲೀ ಪತ್ತೆಯಾಗಿಲ್ಲ.

    ಈ ನಡುವೆ ಸೇನೆಯಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಮೂವರು ವ್ಯಕ್ತಿಗಳು ಶುಕ್ರವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ತನಿಖೆ ಮುಂದುವರೆದಿದ್ದು, ಮೃತದೇಹಗಳನ್ನು ಅಂತಿಮ ವಿಧಿಗಳಿಗಾಗಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಮೃತರನ್ನು ಬುಫ್ಲಿಯಾಜ್‌ನ ಟೋಪಾ ಪೀರ್ ಗ್ರಾಮದ ಸಫೀರ್ ಹುಸೇನ್ (43), ಮೊಹಮ್ಮದ್ ಶೋಕೆಟ್ (27) ಮತ್ತು ಶಬೀರ್ ಅಹ್ಮದ್ (32) ಎಂದು ಗುರುತಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap