ಅಯೋಧ್ಯೆ
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆ ಇಂದು ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ರಾಮ ಮಂದಿರ ನಿರ್ಮಾಣದ ಇತಿಹಾಸವು ಶತಮಾನಗಳಷ್ಟು ಹಿಂದಿನದು. ಮೊಘಲ್ ಚಕ್ರವರ್ತಿ ಬಾಬರ್‌ನ ಸೇನಾಧಿಪತಿಯಾಗಿದ್ದ ಮೀರ್ ಬಾಕಿ ಹಳೆಯ ದೇವಾಲಯವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಹೇಳಲಾಗುತ್ತದೆ.
ಅಂದಿನಿಂದ ಈ ಸ್ಥಳವು ವಿವಾದದಲ್ಲೇ ಇತ್ತು. ಬರೋಬ್ಬರಿ 500 ವರ್ಷಗಳ ಹೋರಾಟ, ಬಲಿದಾನಗಳ ನಂತರ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಗೊಂಡು 2024ರಲ್ಲಿ ಉದ್ಘಾಟನೆಗೊಂಡಿತ್ತು. ಉದ್ಘಾಟನೆ ವೇಳೆ ರಾಮ ಮಂದಿರದ ಕಾಮಗಾರಿ ಸಂಪೂರ್ಣವಾಗಿರಲಿಲ್ಲ. ಇದೀಗ ಸರಿಸುಮಾರು ಒಂದು ವರ್ಷದ ಬಳಿಕ ರಾಮಮಂದಿರದ ಕಾಮಗಾರಿ ಸಂಪೂರ್ಣಗೊಂಡಿದೆ. ಅಯೋಧ್ಯೆ ರಾಮ ಮಂದಿರ ವೈಶಿಷ್ಟ್ಯ ರಾಮ ಮಂದಿರ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿ ಆಗಿದ್ದು, ಕಟ್ಟಡವು ಮೂರು ಅಂತಸ್ತಿನ ರಚನೆಯಾಗಿದೆ. ಇದು ಕುತುಬ್ ಮಿನಾರ್ಗಿಂತಲೂ ಶೇಕಡ 70 ಹೆಚ್ಚು ಎತ್ತರದ್ದಾಗಿದೆ. ರಾಮ ಮಂದಿರವು ಬೃಹತ್ ಕಂಬಳ ಮೇಲೆ ನಿಂತಿದ್ದು, ಶ್ರೀ ರಾಮ ದೇವರು ಇರುವ ಅತ್ಯಂತ ಪವಿತ್ರ ಭಾಗವನ್ನು ಗರ್ಭ ಗೃಹ ಅಥವಾ ಗರ್ಭ ಗುಡಿ ಎಂದು ಹೇಳಲಾಗುತ್ತದೆ. ಮಂದಿರದ ಮೂರನೇ ಮಹಡಿಯಲ್ಲಿ ಅತಿ ಎತ್ತರದ ಶಿಖರ ರೂಪದ ಗೋಪುರವಿದೆ. ಐದು ಮಂಟಪಗಳ ಮೇಲೆ ಐದು ಶಿಖರಗಳಿದ್ದು, ಒಟ್ಟು 300 ಕಂಬಗಳು ಮತ್ತು 44 ತೇಗದ ಬಾಗಿಲುಗಳನ್ನು ಹೊಂದಿದೆ.
ರಾಮ ಮಂದಿರ ನಿರ್ಮಾಣದಲ್ಲಿ ಬಳಸುತ್ತಿರುವ ಇಟ್ಟಿಗೆಗಳನ್ನು 30 ವರ್ಷದಿಂದ ಸಂಗ್ರಹಿಸಿದ್ದಾಗಿದ್ದು, ಅವುಗಳ ಮೇಲೆ ವಿವಿಧ ಭಾಷೆಗಳಲ್ಲಿ ರಾಮ ದೇವರ ಹೆಸರನ್ನು ಕೆತ್ತಲಾಗಿದೆ. ಅಂತೆಯೇ, ತಾಜ್‌ಮಹಲ್ ನಿರ್ಮಾಣಕ್ಕೆ ಬಳಸಿದ ಅದೇ ಮಕ್ರಾನಾ ಅಮೃತ ಶಿಲೆಯನ್ನು ಬಳಸಿಕೊಂಡು ಗರ್ಭಗುಡಿಯ ಒಳಭಾಗವನ್ನು ಅಲಂಕರಿಸಲಾಗಿದೆ.
ಗುಪ್ತರ ಕಾಲದಲ್ಲಿ ಅಂದರೆ ನಾಗರ ಶೈಲಿಯು ಹೊರಹೊಮ್ಮಿದ ಆ ಸಂದರ್ಭದಲ್ಲಿ ದೇವಾಲಯಗಳನ್ನು ನಿರ್ಮಿಸುವಾಗ ಅದಕ್ಕೆ ಕಬ್ಬಿಣ ಅಥವಾ ಉಕ್ಕಿನ ಬಳಕೆಯು ಪ್ರಚಲಿತದಲ್ಲಿ ಇರಲಿಲ್ಲ. ಕಬ್ಬಿಣದ ಬಾಳಿಕೆ ಸುಮಾರು 80-90 ವರ್ಷಗಳು. ಇದನ್ನು ಮನಗಂಡು, ರಾಮ ಮಂದಿರವನ್ನು ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಬಳಸಿ ಅವುಗಳೇ ಪರಸ್ಪರ ಕಚ್ಚಿ ಕೂರುವಂತೆ ಮಾಡುವ ಬೀಗ ಮತ್ತು ಕೀ ಕಾರ್ಯವಿಧಾನದೊಂದಿಗೆ ನಿರ್ಮಿಸಲಾಗಿದೆ. ಇದು ಕಟ್ಟಡಕ್ಕೆ 1,000 ವರ್ಷಗಳವರೆಗಿನ ಜೀವಿತಾವಧಿಯನ್ನು ಖಚಿತಪಡಿಸುತ್ತದೆ. ವಿಶೇಷವೆಂದರೆ, ರಾಮ ಮಂದಿರ ನಿರ್ಮಾಣದಲ್ಲೂ ಯಾವುದೇ ಕಬ್ಬಿಣ ಅಥವಾ ಗಾರೆಯನ್ನು ಸಹ ಬಳಸಲಾಗಿಲ್ಲ.
ರಾಮ ಲಲ್ಲಾ ಮೂರ್ತಿ ಇರುವ ಗರ್ಭ ಗೃಹ ಮಂಟಪದ ಜೊತೆಯಲ್ಲೇ ಈ ದೇಗುಲದಲ್ಲಿ ಹಲವು ಮಂಟಪಗಳಿವೆ. ರಂಗ ಮಂಟಪ ಹಾಗೂ ನೃತ ಮಂಟಪಗಳಿವೆ. ಭಕ್ತರು 32 ಮೆಟ್ಟಿಲುಗಳನ್ನು ಹತ್ತಿ ದೇಗುಲ ಪ್ರವೇಶ ಮಾಡಬೇಕಿದೆ. ನೆಲ ಮಟ್ಟದಿಂದ ಸಿಂಹ ದ್ವಾರವು 16.11 ಅಡಿ ಎತ್ತರದಲ್ಲಿದೆ. ಮಂದಿರದ ಸಂಕೀರ್ಣದ ಒಳಗೆ ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರಾ, ಮಹರ್ಷಿ ಅಗಸ್ತ್ಯ, ನಿಷಾದ ರಾಜ, ಶಬರಿ ಮಾತೆ ಸೇರಿದಂತೆ ಹಲವರಿಗಾಗಿ ಪ್ರತ್ಯೇಕ ಗುಡಿಗಳಿವೆ.
ಮಂದಿರದ ನೆಲ ಮಹಡಿಯಲ್ಲಿ ಗರ್ಭ ಗೃಹದ ಜೊತೆಗೆ 5 ಮಂಟಪಗಳಿವೆ. ರಾಮ ದರ್ಬಾರ್ ಮೊದಲ ಮಹಡಿಯಲ್ಲಿದೆ. ಇನ್ನು ಎರಡನೇ ಮಹಡಿಯಲ್ಲಿ ಏನೇನು ಇರಬೇಕು ಅನ್ನೋದ್ರ ಯೋಜನೆ ಇನ್ನೂ ನಡೆಯುತ್ತಿದೆ.ಭಕ್ತಾದಿಗಳ ವಸತಿ ಸಂಕೀರ್ಣದಲ್ಲಿ ಸ್ನಾನ ಗೃಹ, ಶೌಚಾಲಯ, ವಾಷ್ ಬೇಸಿನ್ ಸೇರಿದಂತೆ ಹಲವು ಸೌಲಭ್ಯ ಇರಲಿದೆ.
ಮಂದಿರದ ಒಟ್ಟು 390 ಸ್ತಂಭಗಳ ಪೈಕಿ ಪ್ರತಿ ಸ್ತಂಭದಲ್ಲೂ 16 ರಿಂದ 28 ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದ್ದು, ಎಲ್ಲವೂ ರಾಮಾಯಣದ ಸನ್ನಿವೇಶಗಳಾಗಿವೆ. ಪ್ರತಿ ರಾಮ ನವಮಿಯ ದಿನ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯನ ಕಿರಣಗಳು ರಾಮ ಲಲ್ಲಾ ವಿಗ್ರಹದ ಹಣೆಯನ್ನು ಸ್ಪರ್ಶಿಸುವ ರೀತಿ ಕನ್ನಡಿಗಳು ಹಾಗೂ ಮಸೂರಗಳನ್ನು ಅಳವಡಿಕೆ ಮಾಡಲಾಗಿದೆ.
23 ಕೋಟಿ ಮಂದಿ ಅಯೋಧ್ಯೆ ಬೇಟಿ ರಾಮಾಯಣ ಕಾಲದಲ್ಲಿ ಆಯೋಧ್ಯೆ ಸುಭೀಕ್ಷವಾಗಿತ್ತು. ದಶರತ ಮಹರಾಜ, ಶ್ರೀರಾಮನ ಆಳ್ವಿಕೆಯಲ್ಲಿ ಪ್ರಜೆಗಳು ಸಂತಸದಿಂದಿದ್ದರು. ಪ್ರತಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆಯೋಧ್ಯೆ ಜನರಿಂದ ತುಂಬಿ ತುಳುಕುತಿತ್ತು. ಈ ಹಿಂದೆ ಅಯೋಧ್ಯೆಯಲ್ಲಿ ನಡೆದ ದಾಳಿ, ದೇವಸ್ಥಾನ ಧ್ವಂಸಗೊಂಡ ಕಾರಣ ಆಯೋಧ್ಯೆಯ ಪರಂಪರೆ ನಶಿಸಿಹೋಗಿತ್ತು. ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ಬಳಿಕ ಆಯೋಧ್ಯೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. ಈಗ ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ಆಯೋಧ್ಯೆ ಚಿತ್ರಣವೇ ಬದಲಾದಂತಿದೆ.
2020ರಲ್ಲಿ 60 ಲಕ್ಷ ಮಂದಿ ಆಯೋಧ್ಯೆಗೆ ಬೇಟಿ ನೀಡಿದ್ದರು. 2025ರ ಜನವರಿಯಿಂದ ಜೂನ್ ತಿಂಗಳವರೆಗೆ ಬರೋಬ್ಬರಿ 23 ಕೋಟಿ ಭಕ್ತರು, ಪ್ರವಾಸಿಗರು ಭೇಟಿ ನೀಡಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ 50 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆಯೋಧ್ಯೆಯಲ್ಲಿ ಇದೀಗ ಗತಕಾಲದ ವೈಭವ ಮರುಕಳಿಸಿದೆ. ಈ ಬಾರಿಯ ಆಯೋಧ್ಯೆ ದೀಪಾವಳಿಯಲ್ಲಿ 26 ಲಕ್ಷಕ್ಕೂ ಅದಿಕ ದೀಪಗಳ ಬೆಳಗಿ ದಾಖಲೆ ಬರೆಯಲಾಗಿತ್ತು. ಇದೀಗ ರಾಮ ಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಧ್ವಜಾರೋಹಣ ಕಾರ್ಯ ನಡೆಯಲಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾರ್ಚ್ 2020 ರಲ್ಲಿ ರಾಮಮಂದಿರದ ಮೊದಲ ಹಂತದ ನಿರ್ಮಾಣವನ್ನು ಪ್ರಾರಂಭಿಸಿತು. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಲಾಕ್ಡೌನ್ನಿಂದಾಗಿ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. 25 ಮಾರ್ಚ್ 2020 ರಂದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ರಾಮನ ವಿಗ್ರಹವನ್ನು ತಾತ್ಕಾಲಿಕ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.ವಿಷ್ಣುವಿನ ಅವತಾರವಾದ ರಾಮ ಲಲ್ಲಾ ರಾಮಮಂದಿರದ ಪ್ರಧಾನ ದೇವರು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರಾಮಂದಿರದ ಶಿಲ್ಪವನ್ನು ಕೆತ್ತಿದ ಪ್ರಧಾನ ಶಿಲ್ಪಿ.








