ನವದೆಹಲಿ:
ಅಯೋಧ್ಯೆಯ ರಾಮ ಮಂದಿರದ ಮೇಲೆ ಪವಿತ್ರ ಧ್ವಜಾರೋಹಣವನ್ನು ಟೀಕಿಸಿದ ಪಾಕಿಸ್ತಾನದ ಹೇಳಿಕೆಯನ್ನು ಭಾರತ ಬುಧವಾರ ತೀವ್ರವಾಗಿ ಖಂಡಿಸಿದೆ , ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪಾಕಿಸ್ತಾನಕ್ಕೆ ಇತರರಿಗೆ ಪಾಠ ಹೇಳುವ ನೈತಿಕ ಸ್ಥಾನಮಾನವಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ “ಮತಾಂಧತೆ, ದಮನ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಅವರು ಮಾತನಾಡಿದರು. ಪಾಕಿಸ್ತಾನವು ಇತರರಿಗೆ ಉಪನ್ಯಾಸ ನೀಡುವ ನೈತಿಕತೆಯನ್ನು ಹೊಂದಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ.
ಮಂಗಳವಾರ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಧ್ವಜಾರೋಹಣದ ಬಗ್ಗೆ ಪೋಸ್ಟ್ ಮಾಡಿದ್ದು, ಇಸ್ಲಾಮೋಫೋಬಿಯಾ” ಮತ್ತು “ಪರಂಪರೆಯ ಅಪವಿತ್ರತೆಯ” ಉದಾಹರಣೆ ಎಂದು ಕರೆದಿತ್ತು. ಅಷ್ಟೇ ಅಲ್ಲದೆ ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವನ್ನು ಉಲ್ಲೇಖಿಸಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದ ಸರ್ಕಾರ ಮತ್ತು ನ್ಯಾಯಾಂಗದ ವಿರುದ್ಧ ಪಾಕಿಸ್ತಾನ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎಂದು ಉಲ್ಲೇಖಿಸಿತ್ತು.
ಬಿಜೆಪಿ ಕೂಡ ಪಾಕಿಸ್ತಾನದ ಹೇಳಿಕೆಗಳನ್ನು ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, “ಪಾಕಿಸ್ತಾನದ ಈ ಮಾತುಗಳು, ಒಸಾಮಾ ಬಿನ್ ಲಾಡೆನ್ ಜಾಗತಿಕ ಶಾಂತಿಯ ಬಗ್ಗೆ ಮಾತನಾಡಿದ್ದರೆ ಹೇಗಿರುತ್ತಿತ್ತೋ ಹಾಗೆ ಕಾಣುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ. “ಮಾನವ ಹಕ್ಕುಗಳು ಅಥವಾ ಅಲ್ಪಸಂಖ್ಯಾತರ ಬಗ್ಗೆ ಪಾಕಿಸ್ತಾನ ಯಾರಿಗೂ ಪಾಠ ಹೇಳುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಕಿಡಿ ಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ,ಶ್ರೀ ರಾಮ ಜನ್ಮಭೂಮಿ ದೇಗುಲದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಿದರು. ರಾಮ ಮಂದಿರ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿ ಆಗಿದ್ದು, ಕಟ್ಟಡವು ಮೂರು ಅಂತಸ್ತಿನ ರಚನೆಯಾಗಿದೆ. ಇದು ಕುತುಬ್ ಮಿನಾರ್ಗಿಂತಲೂ ಶೇಕಡ 70 ಹೆಚ್ಚು ಎತ್ತರದ್ದಾಗಿದೆ. ರಾಮ ಮಂದಿರವು ಬೃಹತ್ ಕಂಬ ಮೇಲೆ ನಿಂತಿದೆ. ರಾಮ ಮಂದಿರದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದನ್ನು ಪಾಕಿಸ್ತಾನ ಟೀಕಿಸಿತ್ತು.








