ರಾಮಕೃಷ್ಣ ಹೆಗಡೆ ಅವರದ್ದು ಬಹುಮುಖ್ಯ ವ್ಯಕ್ತಿತ್ವ :ಮಹಿಮಾ ಪಟೇಲ್

ತುಮಕೂರು:

      ಹಣ, ಹೆಂಡ, ಜಾತಿಗಳೇ ಮೇಲುಗೈ ಸಾಧಿಸುತ್ತಿರುವ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ, ಯುವಜನತೆಯಲ್ಲಿ ಮೌಲ್ಯಾಧಾರಿತ ರಾಜಕಾರಣದ ಚಿಗುರು ಹೊತ್ತಿಸುವ ನಿಟ್ಟಿನಲ್ಲಿ ರಾಷ್ಟಿಯ ನವ ನಿರ್ಮಾಣ ವೇದಿಕೆ ಒಂದು ಸಣ್ಣ ಹೆಜ್ಜೆ ಇಟ್ಟಿದೆ ಎಂದು ರಾಷ್ಟಿಯ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದ್ದಾರೆ.

     ನಗರದ ಹೊಟೇಲ್ ಅಸೋಸಿಯೇಷನ್ ಸುವರ್ಣ ಮಹೋತ್ಸವ ಕಟ್ಟಡದಲ್ಲಿ ರಾಷ್ಟಿಯ ನವ ನಿರ್ಮಾಣ ವೇದಿಕೆ ಹಾಗೂ ವಿವೇಕಾನಂದ ವಿಚಾರವೇದಿಕೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ 97ನೇ ಜನ್ಮ ಜಯಂತಿ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಂದಿನ ಯುವ ಜನತೆ ಸಾಕಷ್ಟು ಗೊಂದಲದಲ್ಲಿ ದ್ದಾರೆ.

    ವ್ಯಕ್ತಿ ಪೂಜೆಯ ರಾಜಕಾರಣ,ಇಲ್ಲ ವಿಚಾರವಂತಿಕೆಯ ರಾಜಕಾರಣವನ್ನು ಅನುಸರಿಸಬೇಕೋ ಎಂಬ ಅನುಮಾನ ಅವರನ್ನು ಕಾಡುತ್ತಿದೆ.ಸೂಕ್ತ ಮಾರ್ಗದರ್ಶನದ ಅಗತ್ಯವಿದೆ.ಈ ನಿಟ್ಟಿನಲ್ಲಿ ರಾಷ್ಟಿಯ ನವನಿರ್ಮಾಣ ವೇದಿಕೆ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ದಾರಿಗೆ ಮುನ್ನುಡಿ ಬರೆದಿದೆ ಎಂದರು.

    ರಾಮಕೃಷ್ಣ ಹೆಗಡೆ ಅವರದ್ದು ಬಹುಮುಖ್ಯ ವ್ಯಕ್ತಿತ್ವ.ಜನತೆಯ ಕಷ್ಟಗಳಿಗೆ ಮಿಡಿದು, ಆಡಳಿತವನ್ನೇ ಜನತೆಯ ಬಾಗಿಲಿಗೆ ತೆಗೆದುಕೊಂಡು ಹೋದವರು.ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್,ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ರೈತ ಸಾಲದ ಬಡ್ಡಿ ಮನ್ನಾ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು.ಇದರ ಭಾಗವಾಗಿಯೇ ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು ಎಂದು ಮಹಿಮಾ ಪಟೇಲ್ ನುಡಿದರು.

    ಹಿರಿಯ ರಾಜಕಾರಣಿ ಎಂ.ಪಿ.ನಾಡಗೌಡ ಮಾತನಾಡಿ,ಪ್ರಜಾಪ್ರಭುತ್ವ ವೈಜ್ಞಾನಿಕ ತಳಹದಿಯ ಮೇಲೆ ನಡೆಯಬೇಕು. ಭಾವನಾತ್ಮಕ ವಿಚಾರಗಳ ಮೇಲಲ್ಲ.ಈ ದೇಶದಲ್ಲಿರುವ ಎಲ್ಲಾ ಧರ್ಮಗಳು ನಮಗೆ ಸೇರಿದ್ದು,ಅವುಗಳನ್ನು ಪ್ರೀತಿಸುವ, ಗೌರವಿಸುವುದನ್ನು ಕಲಿಯಬೇಕು.ದೇಶಕ್ಕೆ ಸ್ವಾತಂತ್ರ ಬಂದಾಗ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿತ್ತು.ನೆಹರು ಪ್ರಧಾನಿಯಾದ ನಂತರ ಹಂತ ಹಂತವಾಗಿ ದೇಶವನ್ನು ಕಟ್ಟಿದರು. ಅವರಿಗೆ ಸರ್ಧಾರ್ ವಲ್ಲಭಾಯಿ ಪಟೇಲ್ ಸೇರಿದಂತೆ ಎಲ್ಲರು ಸಾಥ್ ನೀಡಿದ್ದರು.ನೆಹರು ಅವರನ್ನು ಅಪಹಾಸ್ಯ ಮಾಡುವುದು.ದೇಶದ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿದಂತೆ ಎಂದರು.

   ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ಅವರು ಹೊಸ ರಾಜಕೀಯ ನಾಯಕರನ್ನು ಹುಟ್ಟು ಹಾಕಿದವರಲ್ಲಿ ಪ್ರಮುಖರು,ಈ ದೇಶದ ರಾಜಕೀಯ ಬೆಳವಣಿಗೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ರಾಷ್ಟಿಯ ನವನಿರ್ಮಾಣ ವೇದಿಕೆ ಮಾಡುತ್ತಾ ಬಂದಿದೆ. ಮುಂದೆಯೂ ಮಾಡಲಿದೆ.ಮೌಲ್ಯಾಧಾರಿತ ರಾಜಕಾರಣವೇ ನಮ್ಮ ವೇದಿಕೆಯ ಉದ್ದೇಶ ಎಂದು ಎಂ.ಪಿ.ನಾಡಗೌಡ ತಿಳಿಸಿದರು.

   ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಇದು ಒಂದು ರೀತಿ ಮೌಲ್ಯಾಧಾರಿತ ರಾಜಕೀಯ ನಾಯಕರ ನೆನಪಿನಲ್ಲಿ ಇಂದಿನ ರಾಜಕೀಯ ವ್ಯವಸ್ಥೆಯ ಆತ್ಮಾವಲೋಕನ ಕಾರ್ಯಕ್ರಮವಾಗಿದೆ.ಹಣ, ಹೆಂಡ, ಜಾತಿಯ ಹೆಸರತ್ತದೆ ಆರಿಸಿ ಬರುವ ನಾಯಕರು ಇಲ್ಲವಾಗಿದ್ದಾರೆ. ಮತದಾರರನ್ನು ಅಪಮೌಲ್ಯಗೊಳಿಸುವ ಪ್ರಕ್ರಿಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.ನ್ಯಾಯಪರ ದ್ವನಿ ಎತ್ತುವ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗಿದೆ.

     ವಿಷಯಾಧಾರಿತವಾಗಿ , ದೇಶದ ಸಮಸ್ಯೆಗಳನ್ನು ಪರಿಹರಿಸುವ ಸಾಮೂಹಿಕ ನಾಯಕತ್ವದ ಅಗತ್ಯವಿದೆ ಎಂದರು.ಹಿರಿಯ ಸಾಹಿತಿ ಡಾ.ಕವಿತಾ ಕೃಷ್ಣ ರಾಮಕೃಷ್ಣ ಹೆಗಡೆ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯ ಅಧ್ಯಕ್ಷತೆಯನ್ನು ವಿವೇಕಾನಂದ ವಿಚಾರ ವೇದಿಕೆ ಅಧ್ಯಕ್ಷ ಕೆ.ಜಿ.ಎಲ್.ರವಿ ವಹಿಸಿದ್ದರು.ಶಿವಗಂಗೆಯ ಹೊನ್ನಗವಿಮಠದ ಶ್ರೀಶ್ರೀರುದ್ದಮುನಿ ಶಿವಾಚಾರ್ಯಸ್ವಾಮೀಜಿ,ದೊಡ್ಡಬಳ್ಳಾಪುರ ಶ್ರೀಕ್ಷೇತ್ರ ಬಿಲ್ವವನದ ಶ್ರೀನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ರಾಮಕೃಷ್ಣ ಹೆಗಡೆ ಅವರ ಪುತ್ರಿ ಶ್ರೀಮಮತ ನಿಚ್ಚಾನಿ, ಹೊಟೇಲ್ ಮಾಲೀಕರ ಪತ್ತಿನ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷರಾದ ಸಿ.ವಿ.ಮಹದೇವಯ್ಯ,ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್,ಮುಖಂಡರಾದ ರಮೇಶ್‌ಗೌಡ,ಸುಭಾಷಚಂದ್ರ ಕಪಾಟೆ,ಶ್ರೀಮತಿ ಯಶೋಧ, ಎ.ಮಹಾಲಿಂಗಯ್ಯ, ಡಾ.ನಾಗರಾಜು, ಮೋಹನ್ ಕುಮಾರ್ ಉಪಸ್ಥಿತರಿದ್ದರು.ಇದೇ ವೇಳೆ ಡಾ.ಎಂ.ಪಿ.ನಾಡಗೌಡ ಅವರನ್ನು ಅಭಿನಂದಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap