KSRTC ಟಿಕೆಟ್‌ ದರ ಏರಿಕೆ ಸುಳಿವು ನೀಡಿದ್ರಾ ರಾಮಲಿಂಗಾ ರೆಡ್ಡಿ ….!

ಬೆಂಗಳೂರು

      ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್​​ಸಿ) ಮಾದರಿಯಲ್ಲೇ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆ ನಿರ್ಧಾರಗಳನ್ನು ಕೈಗೊಳ್ಳಲು ಪ್ರತ್ಯೇಕ ನಿಯಂತ್ರಣ ಆಯೋಗ (ಕೆಟಿಆರ್​ಸಿ) ರಚನೆಗೆ ಸರ್ಕಾರ ಮುಂದಾಗಿದೆ ಎಂಬ ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಾರಿಗೆ ಸಚಿವರು, ಹಿಂದಿನ ಬಿಜೆಪಿ ಸರ್ಕಾರ ಸಂಸ್ಥೆಯನ್ನು ನಷ್ಟದಲ್ಲಿಟ್ಟು ಹೋಗಿದೆ. ಪರಿಣಾಮವಾಗಿ ದರ ಏರಿಕೆ ಅನಿಬಾರ್ಯವಾಗಿದೆ ಎಂದಿದ್ದಾರೆ. ಆ ಮೂಲಕ ಟಿಕೆಟ್ ದರ ಏರಿಕೆಯ ಸುಳಿವು ನೀಡಿದ್ದಾರೆ.

   ‘ಅಶೋಕ್ ರವರೇ, ನೀವು ಸಾರಿಗೆ ಸಚಿವರಾಗಿದ್ದವರು, ಸಾರಿಗೆ ಸಂಸ್ಥೆಗಳ‌ ಬಗ್ಗೆ ತಿಳಿದೂ ಕೂಡ ಈ ರೀತಿ ಮಾತನಾಡುತ್ತಿದ್ದಾರಾ ಎಂದರೆ ಆಶ್ಚರ್ಯವಾಗುತ್ತಿದೆ. 2013 ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ ಬಸ್ ಪ್ರಯಾಣ ದರ 10.5% ಏರಿಕೆ ಮಾಡಿರುವುದು ಮರೆತುಬಿಟ್ಟಿದ್ದೀರಾ? 2020 ರಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಬಸ್ ಪ್ರಯಾಣ ದರ 12% ಹೆಚ್ಚಳ ಮಾಡಿದಾಗ ನೀವು ಕ್ಯಾಬಿನೆಟ್ ಮಂತ್ರಿಯಾಗಿದ್ದರಲ್ಲವೇ?ಆಗ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ. ದಿನಾಂಕ: 15/11/2021 ರಲ್ಲಿ ಎಂ.ಆರ್ ಶ್ರೀನಿವಾಸಮೂರ್ತಿ ಭಾಆಸೇ (ನಿವೃತ್ತ) ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸಮಿತಿಯನ್ನು ತಮ್ಮದೇ ಬಿಜೆಪಿ ಸರ್ಕಾರ ರಚಿಸಿತ್ತು.

   ಅನೇಕ ಶಿಫಾರಸುಗಳೊಂದಿಗೆ ಪ್ರಮುಖವಾಗಿ, ಬಸ್ ಪ್ರಯಾಣ ದರವನ್ನು Institutional Arrangement for Revision of Bus Fares ಶೀರ್ಷಿಕೆಯಡಿಯಲ್ಲಿ KERC ಮಾದರಿಯಲ್ಲಿ ಕಾಲಕಾಲಕ್ಕೆ ಬಸ್ ದರವನ್ನು ಹೆಚ್ಚಿಸಬೇಕು, ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ಸದರಿ ಸಮಿತಿಯು ವರದಿ ನೀಡಿದ್ದು, ನೀವು ಕ್ಯಾಬೆನೆಟ್ ಮಂತ್ರಿಯಾಗಿದ್ದಾಗ ಯಾಕೆ ಈ ವರದಿಯನ್ನು ತಿರಸ್ಕರಿಸಲಿಲ್ಲ. ತಮ್ಮದೇ ಸರ್ಕಾರ ಅಂಗೀಕಾರ ಮಾಡಿದ ವರದಿಯನ್ನು ಈಗ ಸರಿಯಿಲ್ಲವೆಂದು ಹೇಳಲು ಹೊರಟ್ಟಿದ್ದೀರಾ’ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

   ಕರ್ನಾಟಕ ಸರ್ಕಾರವು ದಿನಾಂಕ 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆ‌ರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಮಾಹಿತಿಯೇ ತಮಗೆ ಇಲ್ಲವೇ? ತಮ್ಮದೇ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು 5900 ಕೋಟಿ ರೂ. ನಷ್ಟದಲ್ಲಿಟ್ಟು ಹೋಗಿದ್ದು, ಈಗ ಸಾರಿಗೆ ಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ? ನನಗೆ ರಾಜಕೀಯವೇ ಮುಖ್ಯ.

    ಸಾರಿಗೆ ಸಂಸ್ಥೆಗಳು ಉಳಿದರೇನು? ಮುಳುಗಿದರೆ ನನಗೇನು? ಅನ್ನುವ ಮನಸ್ಥಿತಿಯೇ ತಿಳಿಯದಾಗಿದೆ. ಅಶೋಕ್ ರವರೇ ತಾವು ಕೂಡ ಸರ್ಕಾರದ ಭಾಗವಾಗಿ ತೆಗೆದುಕೊಂಡ ಎಲ್ಲಾ‌‌ ಕ್ರಮಗಳನ್ನು ಇಂದು ಮರೆಮಾಚಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ. 

   ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕೆಗಳಿಗೂ ತಿರುಗೇಟು ನೀಡಿರುವ ರಾಮಲಿಂಗಾ ರೆಡ್ಡಿ, ಸಾರಿಗೆ ಸಂಸ್ಥೆಗಳನ್ನು ದಿವಾಳಿ ಮಾಡಿ ಹೊರಟ್ಟಿದ್ದ ಬಿಜೆಪಿಯ ಅಂದಿನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲಿನ ಕರ್ಮಕಾಂಡಗಳನ್ನು ಪಟ್ಟಿ ಮಾಡಿ ಮತ್ತೊಮೆ ಮಗದೊಮ್ಮೆ ತಿಳಿಸಿ ಹೇಳಿ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ (ನಿವೃತ್ತಿ ಇನ್ನಿತರೆ ಕಾರಣಗಳಿಂದ) ಒಂದೇ ಒಂದು ನೇಮಕಾತಿ ಆಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ, ಅರ್ಧವೇತನ, ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಎಂದು ರೆಡ್ಡಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸ್ಥೆಗಳಿಗೆ ಡಕೋಟ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಯಡಿಯೂರಪ್ಪ, ಬೊಮ್ಮಾಯಿಗೆ ಸಲ್ಲಬೇಕು‌. ಕಳೆದ 5 ವರ್ಷಗಳಲ್ಲಿ ಬಿಎಂಟಿಸಿ‌ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆಯೇ ಮಾಡಿಲ್ಲ. ಇವರ ಟ್ವೀಟ್​​ಗಳಿಗೆ ನಮ್ಮ ಉತ್ತರ ಅಭಿವೃದ್ಧಿ ಎಂದು ರಾಮಲಿಂಗಾ ರೆಡ್ಡಿ ಉಲ್ಲೇಖಿಸಿದ್ದಾರೆ.

Recent Articles

spot_img

Related Stories

Share via
Copy link