ಅಪಘಾತ ಹೆಚ್ಚಳ : ಸಚಿವರಿಂದ ನಾಲ್ಕು ನಿಗಮಗಳಿಗೆ ಖಡಕ್ ವಾರ್ನಿಂಗ್​

ಬೆಂಗಳೂರು

     ಇತ್ತೀಚಿನ ವರ್ಷಗಳಲ್ಲಿ ಕೆಎಸ್ಆರ್​ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ ಚಾಲಕರಿಂದ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೆಲವೊಂದು ಪ್ರಕರಣಗಳಲ್ಲಿ ವಾಹನಗಳಿಂದ ಸಮಸ್ಯೆಯಾಗಿ ಅಪಘಾತವಾದರೆ, ಬಹುತೇಕ ಪ್ರಕರಣಗಳಲ್ಲಿ ಚಾಲಕರ ನಿರ್ಲಕ್ಷ್ಯದಿಂದ ಅಪಘಾತವಾಗಿ ಸಾರ್ವಜನಿಕರು ಪ್ರಾಣ ಕಳೆದುಕೊಂಡಿರುವ ಅನೇಕ ನಿದರ್ಶನಗಳಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲೇಬೇಕು ಅನ್ನುವ ಕಾರಣಕ್ಕೆ ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಬಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. 

    ಬಿಎಂಟಿಸಿ, ಕೆಎಸ್ಆರ್​​ಟಿಸಿ, ಕಲ್ಯಾಣ ಕರ್ನಾಟಕ, ವಾಯುವ್ಯ ಕರ್ನಾಟಕ ಸೇರಿದಂತೆ ನಾಲ್ಕು ನಿಗಮಗಳಿಗೆ ಅನ್ವಯವಾಗುವಂತೆಯೇ ಕ್ರಮವಹಿಸಲು ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಯಾವ ಸರ್ಕಾರಿ ಬಸ್ ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡಿ ತೊಂದರೆ ಉಂಟು ಮಾಡುತ್ತಾರೋ ಅಂತಹ ಚಾಲಕರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮಕ್ಕೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಯಾವ ಚಾಲಕರು ಈ ಹಿಂದೆ ಅಜಾಗರೂಕತೆಯಿಂದ ಚಾಲನೆ ಮಾಡಿ ಸಮಸ್ಯೆ ಉಂಟು ಮಾಡಿದ್ದಾರೋ ಅಂತಹ ಚಾಲಕರ ಲೀಸ್ಟ್ ರೆಡಿ ಮಾಡಿ, ಮತ್ತೊಮ್ಮೆ ಅಂತಹ ಚಾಲಕರು ಅದೇ ತಪ್ಪು ಮಾಡಿದಲ್ಲಿ ಮುಲಾಜಿಲ್ಲದೇ ವಜಾ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ಈಗಾಗಲೇ ನಾಲ್ಕು ಸಾರಿಗೆ ನಿಮಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ವಿಚಾರ ಸಂಬಂಧ ಆಕ್ಟೀವ್ ಆಗುವಂತೆ ತಿಳಿಸಿದ್ದಾರೆ.

   ಇನ್ನು ಖಾಯಂ ನೌಕರರನ್ನ ಹೊರತು ಪಡಿಸಿ ಅನೇಕ ಗುತ್ತಿಗೆ ನೌಕರರು ಕೂಡ ಗುತ್ತಿಗೆ ಕಂಪನಿಗಳ ಮೂಲಕ ಸಾರಿಗೆ ಬಸ್​ಗಳಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲರನ್ನು ಖಾಸಗಿ ಕಂಪನಿಗಳೇ ನಿರ್ವಹಣೆ ಮಾಡುತ್ತಿದ್ದರು, ಈ ಚಾಲಕರು ಮಾಡುವ ತಪ್ಪಿನಿಂದ ನಿಗಮಗಳಿಗೆ ಕೆಟ್ಟ ಹೆಸರು ಬರುತ್ತಿರುವ ಬಗ್ಗೆ ಕೂಡ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ. ಅದರಲ್ಲೂ ಬಿಎಂಟಿಸಿ ಗುತ್ತಿಗೆ ಚಾಲಕರಿಂದಲೇ ಅತೀ ಹೆಚ್ಚು ಸಮಸ್ಯೆಗಳು ಉಂಟಾಗುತ್ತಿವೆ. 

   ಸದ್ಯ ಬಿಎಂಟಿಸಿ ಚಾಲಕರಿಗಾಗಿ ಮೂರು ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಮೂರು ಗುತ್ತಿಗೆ ಕಂಪನಿಗಳಿಗೂ ಈಗಾಗಲೇ ಸೂಚನೆ ನೀಡಲಾಗಿದ್ದು, ಈ ಹಿಂದೆ ಎರಡಕ್ಕಿಂತ ಹೆಚ್ಚು ಬಾರಿ ಅಜಾಗರೂಕ ಚಾಲನೆ ಮಾಡಿರುವ ಚಾಲಕರನ್ನ ಗುತ್ತಿಗೆಯಿಂದ ಕೈ ಬಿಡಲು ಸೂಚಿಸಲಾಗಿದ್ದು, ಮುಂದೆಯೂ ಇಂತಹ ಚಾಲಕರ ವಿರುದ್ಧ ಎಚ್ಚರ ವಹಿಸಿ ತಪ್ಪು ಮಾಡಿದ್ದಲ್ಲಿ, ಕಠಿಣ ಕ್ರಮಕ್ಕೂ ಸೂಚನೆ ನೀಡಿದ್ದಾರೆ. ಈ ಬಗ್ಗೆ ರಾಮು ಎಂಬ ಪ್ರಯಾಣಿಕರು ಪ್ರತಿಕ್ರಿಯಿಸಿ, ಸಾರಿಗೆ ಸಚಿವರ ನಿರ್ಧಾರವನ್ನು ಸ್ವಾಗತಿಸಿದರು.

    ಒಟ್ಟಿನಲ್ಲಿ ಇನ್ಮುಂದೆ ಸರ್ಕಾರಿ ಬಸ್ ಚಾಲಕರು ಇನ್ನಷ್ಟು ಎಚ್ಚರ ವಹಿಸಿ ಚಾಲನೆ ಮಾಡುವುದು ಸೂಕ್ತ. ಇಲ್ಲದಿದ್ದರೆ, ಯಾವುದೋ ಒತ್ತಡದಲ್ಲಿ ಗಾಡಿ ಓಡಿಸಿ, ಅಮಾಯಕರ ಜೀವಕ್ಕೆ ತೊಂದರೆ ಮಾಡಿದ್ದಲ್ಲಿ ಕೆಲಸ ಕಳೆದುಕೊಳ್ಳುವ ಜೊತೆಗೆ ಕಠಿಣ ಕ್ರಮಗಳನ್ನ ಕೂಡ ಎದುರಿಸಬೇಕಾಗುತ್ತದೆ.

Recent Articles

spot_img

Related Stories

Share via
Copy link