ಪರಸ್ಪರ ಸಂಘರ್ಷ ಯಾರಿಗೂ ಹಿತವಲ್ಲ

ದಾವಣಗೆರೆ:

    ಸರ್ಕಾರದ ಮಟ್ಟದಲ್ಲಿ ಪರಸ್ಪರ ಸಂಘರ್ಷ ನಡೆಸುವುದು ಯಾರಿಗೂ ಹಿತವಲ್ಲ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ.

     ನಗರದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದೂ ಯುವ ಶಕ್ತಿ ವತಿಯಿಂದ ಪ್ರತಿಷ್ಠಾಪಿಸಿರುವ ಇಷ್ಟಲಿಂಗ ಗಣಪತಿಯ ದರುಶನ ಪಡೆದು, ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಅಧಿಕಾರ ನಡೆಸಲಿ, ರಾಜ್ಯ ಮತ್ತು ಜನರ ಹಿತದೃಷ್ಟಿಯಿಂದ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ನಡೆಸಬೇಕೆ ಹೊರತು, ಪರಸ್ಪರ ಸಂಘರ್ಷ ನಡೆಸಬಾರದು. ಇದರಿಂದ ಯಾರಿಗೂ ಹಿತವಿಲ್ಲ. ಆದ್ದರಿಂದ ಸಂಘರ್ಷ ನಿಲ್ಲಿಸಿ, ಮುಖ್ಯಮಂತ್ರಿಗಳಾದಿಯಾಗಿ ಶಾಸಕರು, ಸಚಿವರು ಒಳ್ಳೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

    ಧರ್ಮ ಹೊಡೆಯುವು ವಿಚಾರದಲ್ಲಿ ಮಾತನಾಡಿ, ತಾವು ಸಾಕಷ್ಟು ನೋವು ಅನುಭವಿಸಿದ್ದೇವೆ. ರಾಜಕಾರಣಿಗಳು ದೊಡ್ಡವರಿದ್ದಾರೆ. ಎಲ್ಲವನ್ನೂ ಅವರೇ ಬಗೆಹರಿಸಿಕೊಳ್ಳಲಿದ್ದಾರೆ. ಈ ವಿಚಾರದಲ್ಲಿ ತಾವು ಏನೂ ಹೆಚ್ಚಿನದಾಗಿ ಮಾತನಾಡುವುದಿಲ್ಲ ಎಂದರು.
ದೇಶವಾಸಿಗಳಲ್ಲಿ ಸ್ವಾಭಿಮಾನ ಬೆಳೆಸಲು ಹಾಗೂ ಹಿಂದು ಸಮಾಜದ ಸಂಘಟನೆಗಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕವಾಗಿ ಗಣೇಶ ಉತ್ಸವ ಆಚರಣೆಗೆ ತಂದರು. ಹೀಗಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲ. ಎಲ್ಲರೂ ಸೇರಿ ಸಾಮರಸ್ಯದರಿಂದ ಆಚರಿಸುವ ಉತ್ಸವ ಇದಾಗಿದೆ. ಆ ವಿನಾಯಕನ ಕರುಣೆ ಎಲ್ಲರ ಮೇಲೆ ಹೊಳೆಯಾಗಿ ಹರಿದು ಬರಲಿ ಎಂದು ಆಶಯ ವ್ಯಕ್ತಪಡಿಸಿದರು.

    ಕರ್ನಾಟಕದ ಮಧ್ಯವರ್ತಿ ಕೇಂದ್ರವಾಗಿರುವ ದಾವಣಗೆರೆಯಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಒಂದಿಲ್ಲೊಂದು ಮಹತ್ತರವಾದ ಸತ್ಕಾರ್ಯಗಳು ನಡೆಯುತ್ತಿರುತ್ತವೆ. ಇಲ್ಲಿಯ ಭಕ್ತರಿಗೆ ರಂಭಾಪುರಿ ಪೀಠದ ಮೇಲೆ ವಿಶೇಷ ಅಭಿಮಾನವಿದ್ದು, ಎಲ್ಲಾ ವರ್ಗದ, ಸಮುದಾಯಗಳ ಭಕ್ತರು ಶ್ರೀಪೀಠದ ಮೇಲೆ ಇಟ್ಟಿರುವ ವಿಶ್ವಾಸ ದೊಡ್ಡದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಲಿಂ.ವೀರಗಂಗಾಧರೇಶ್ವರ ಜಗದ್ಗುರುಗಳು ದಾವಣಗೆರೆಯನ್ನು ದೀರ್ಘಕಾಲದ ವರೆಗೆ ತಮ್ಮ ತವರೂರು ಎಂಬುದಾಗಿಯೇ ಭಾವಿಸಿದ್ದರು. ತಾವು ಸಹ ಕಳೆದ 27 ವರ್ಷಗಳಿಂದ ಈ ಮಹಾನಗರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಪ್ರತಿ ವರ್ಷ ಆಷಾಢ ಮಾಸದಲ್ಲಿ ಐದು ದಿನಗಳ ಕಾಲ ಇಷ್ಟಲಿಂಗ ಮಹಾಪೂಜೆ, ಧರ್ಮ ಸಭೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

     ಇದು ವರೆಗೂ ಇಷ್ಟಲಿಂಗದ ಗಣಪತಿಯನ್ನು ಎಲ್ಲೂ ಕಂಡಿಲ್ಲ. ಹಿಂದು ಯುವ ಶಕ್ತಿ ಸಂಘಟನೆಯ ಯುವಕರ ಸಹಾಸ ಮೆಚ್ಚುವಂತದ್ದಾಗಿದೆ. ಸಮಾಜದಲ್ಲಿ ಇಂಥಹ ಯುವಕರಿಂದಲೇ ಸಂಸ್ಕಾರ ಬೆಳೆದು ರಾಷ್ಟ್ರದ ಅಭಿವೃದ್ದಿಯೂ ಆಗಲಿದೆ ಎಂದು ನುಡಿದ ಶ್ರೀಗಳು, ಈ ಇಷ್ಟಲಿಂಗ ಗಣಪತಿಯು ಧಾರ್ಮಿಕ ಪ್ರಜ್ಞಾವಂತರಿಗೆ ಹೊಸ ಬೆಳೆಕು ಮತ್ತು ಜೀವನ ಉಲ್ಲಾಸ ನೀಡಲಿ ಎಂದು ಹಾರೈಸಿದರು.
ಶಿವ ಎಲ್ಲಾ ಕಡೆಯೂ ಆವರಿಸಿದ್ದಾನೆ. ಶಿವಲಿಂಗ ಇಲ್ಲದೇ ಜಗತ್ತೇ ಇಲ್ಲ. ಇಲ್ಲಿ 13 ಸಾವಿರ ಶಿವಲಿಂಗಗಳು ಪೂಜೆಗೆ ಒಳಪಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಶ್ರೀಗಣಪನು ಎಲ್ಲರ ಪ್ರೀತಿ, ಗೌರವ ಹಾಗೂ ಭಕ್ತಿಯನ್ನು ಸ್ವೀಕರಿಸಿ, ಸಂಘರ್ಷ ತಪ್ಪಿಸಿ, ಸಾಮರಸ್ಯ ಉಂಟು ಮಾಡಲಿ. ಸಮಾಜದಲ್ಲಿ ಸುಖ-ಶಾಂತಿ ನೆಲೆಸುವಂತೆ ಮಾಡಲಿ ಎಂದು ಆಶಿಸಿದರು.

      ಈ ಸಂದರ್ಭದಲ್ಲಿ ಶ್ರೀವೀರಶೈವ ಸದ್ಭೋದನಾ ಸಂಸ್ಥೆಯ ದೇವರಮನಿ ಶಿವಕುಮಾರ್, ಹಿಂದೂ ಯುವ ಶಕ್ತಿಯ ಪಿ.ಸಿ.ರಾಮನಾಥ್, ಕೇಶವ, ಶಿವಪ್ರಸಾದ್ ಕುರಡಿಮಠ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್, ಟಿಂಕರ್ ಮಂಜಣ್ಣ ಸೇರಿದಂತೆ ಹಲವರು ಹಾಜರಿದ್ದರು.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link